ತುಮಕೂರಿನಲ್ಲಿ ಕೋರ್ಟ್ ಕಟ್ಟಡದಿಂದ ಜಿಗಿದು ಕೈದಿ ಆತ್ಮಹತ್ಯೆ
ತುಮಕೂರು, ಮೇ 26: ಇಲ್ಲಿನ ಕೋರ್ಟ್ ಕಟ್ಟಡದಿಂದ ಜಿಗಿದು ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ಕೋರ್ಟ್ ಕಟ್ಟಡದ ಮೂರನೇ ಅಂತಸ್ತಿನಿಂದ ಜಿಗಿದು, 29 ವರ್ಷದ ಚಂದ್ರಯ್ಯ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂತಿಮ ಆದೇಶ ಇದ್ದ ಹಿನ್ನೆಲೆಯಲ್ಲಿ ಆತನನ್ನು ಇಲ್ಲಿನ ಕೋರ್ಟ್ ಸಂಕೀರ್ಣಕ್ಕೆ ಕರೆತರಲಾಗಿತ್ತು.
ಮಹಡಿಯಿಂದ ಜಿಗಿದ ಆತ ಕೆಳಗೆ ಬಿದ್ದು ತೀವ್ರ ಅಸ್ವಸ್ಥನಾದ. ಆತನನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ. ಚಂದ್ರಯ್ಯ ಗುಬ್ಬಿ ತಾಲೂಕಿನ ಅದಲಕೆರೆ ಗ್ರಾಮದವನು. 2017ನೇ ಇಸವಿಯಲ್ಲಿ ಸಂಬಂಧಿಕನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಬಂಧಿಯಾಗಿದ್ದ.

ತುಮಕೂರಿನ ಕೇಂದ್ರ ಬಂದೀಖಾನೆಯಲ್ಲಿದ್ದ ಚಂದ್ರಯ್ಯನ ವಿರುದ್ಧದ ಪ್ರಕರಣದ ಅಂತಿಮ ಆದೇಶ ಶನಿವಾರ ಇತ್ತು. ಆದ್ದರಿಂದ ಕೋರ್ಟ್ ಗೆ ಕರೆತರಲಾಗಿತ್ತು. ಇದೇ ವೇಳೆ ಕೋರ್ಟ್ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂದಹಾಗೆ, ಜೈಲಿನಲ್ಲೂ ಚಂದ್ರಯ್ಯ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications