ಪ್ರಧಾನಿ ಮೋದಿ ಜುಲೈನಲ್ಲಿ ಕರ್ನಾಟಕಕ್ಕೆ ಆಗಮನ
ಬೆಂಗಳೂರು, ಮೇ 19: ಏಕಾಂಗಿಯಾಗಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಬಿಜೆಪಿ 17 ಸೀಟುಗಳನ್ನು ಕಾಣಿಕೆಯಾಗಿ ಕೊಟ್ಟಿದೆ. ಈ ಮಧ್ಯೆ, ಪ್ರಧಾನಿಯಾಗಿ ಮೋದಿ ಅವರು ರಾಜ್ಯಕ್ಕೆ ಯಾವಾಗ ಬರುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ.
ಈ ಬಗ್ಗೆ ಸುಳಿವು ನೀಡಿರುವ ವಿಧಾನ ಪರಿಷತ್ ಸದಸ್ಯ ವಿ ಸೋಮಣ್ಣ ಅವರು ಜುಲೈನಲ್ಲಿ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಾರೆ ಎಂದಿದ್ದಾರೆ. ಜುಲೈನಲ್ಲೇನು ಅಂಥಾ ವಿಶೇಷ ಆಂದರೆ ನಾಡಿನ ಹಿರಿಯ ಚೇತನ ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 107ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜುಲೈನಲ್ಲಿ ಬೆಂಗಳೂರಲ್ಲಿ ಗುರುವಂದನೆ ಹಮ್ಮಿಕೊಳ್ಳಲಾಗುವುದು. ಆ ಸಂದರ್ಭಕ್ಕೆ ನೂತನ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದಾರೆ ಎಂದು ಸೋಮಣ್ಣ ತಿಳಿಸಿದ್ದಾರೆ.
ಜತೆಗೆ ಗುರುವಂದನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೂ ಸಹ ಆಗಮಿಸಲಿದ್ದಾರೆ. ಒಟ್ಟಾರೆಯಾಗಿ ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಮಾಡಲಾಗುವುದು. ಇದಕ್ಕಾಗಿ ನೂತನ ಸಂಸದ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮುಂತಾದ ಮುಖಂಡರೊಂದಿಗೆ ದೆಹಲಿಗೆ ತೆರಳಿ ಮೋದಿ ಅವರನ್ನು ಆಹ್ವಾನಿಸಲಿದ್ದೇವೆ ಎಂದು ಸೋಮಣ್ಣ ಹೇಳಿದ್ದಾರೆ.













Click it and Unblock the Notifications