Tumkur: ದೇವರಾಯನದುರ್ಗ, ಬಸದಿಬೆಟ್ಟ, ನಾಮದ ಚಿಲುಮೆಗೆ ಪ್ರವೇಶ ನಿಷೇಧ; ಜಿಲ್ಲಾಧಿಕಾರಿ ಕೊಟ್ಟ ಸೂಚನೆ ಏನು?
ಹೊಸ ವರ್ಷಾಚರಣೆ ಖುಷಿಯಲ್ಲಿದ್ದ ತುಮಕೂರು, ಬೆಂಗಳೂರು ಜನತೆಗೆ ತುಮಕೂರು ಜಿಲ್ಲಾಧಿಕಾರಿ ಶಾಕ್ ಕೊಟ್ಟಿದ್ದಾರೆ. ತುಮಕೂರು ಸಮೀಪವಿರುವ ಪ್ರಮುಖ ಪ್ರವಾಸಿ ತಾಣಗಳಾದ ದೇವರಾಯನ ದುರ್ಗ, ಬಸದಿ ಬೆಟ್ಟ ಮತ್ತು ನಾಮದ ಚಿಲುಮೆಗೆ ಪ್ರವೇಶ ನಿರ್ಬಂಧಿಸಿ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ.
ತುಮಕೂರು ತಾಲ್ಲೂಕು ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ನಾಮದ ಚಿಲುಮೆ, ಬಸದಿ ಬೆಟ್ಟ ಮತ್ತು ದೇವರಾಯನದುರ್ಗ ಪ್ರದೇಶಗಳಿಗೆ ಡಿಸೆಂಬರ್ 31, 2024 ರಂದು ಬೆಳಗ್ಗೆ 8 ಗಂಟೆಯಿಂದ 2025ರ ಜನವರಿ 2 ಬೆಳಗ್ಗೆ 8 ಗಂಟೆಯವರೆಗೆ ಸಾರ್ವಜನಿಕರು, ಪ್ರವಾಸಿಗರ ಹಾಗೂ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿ ಆದೇಶ ನೀಡಲಾಗಿದೆ. ಈ ಮಾರ್ಗದಲ್ಲಿ ದೈನಂದಿನ ಚಟುವಟಿಕೆಗಳಿಗಾಗಿ ತೆರಳುವ ಸ್ಥಳೀಯರು ಈ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸದೆ ತೆರಳಲು ಸೂಚನೆ ನೀಡಲಾಗಿದೆ.

ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದೆ. ಹೊಸ ವರ್ಷಾಚರಣೆಗಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಅವಕಾಶವಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
ನಾಮದ ಚಿಲುಮೆ ಅರಣ್ಯ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಸಂಚರಿಸುವ ವನ್ಯ ಜೀವಿಗಳಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಸಂಚಾರವನ್ನು, ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.
ಪೊಲೀಸ್ ಇಲಾಖೆ ಕಟ್ಟೆಚ್ಚರ
ಹೊಸ ವರ್ಷ ಹತ್ತಿರ ಬರುತ್ತಿದ್ದು ಪೊಲೀಸ್ ಇಲಾಖೆ ಎಚ್ಚರ ವಹಿಸುತ್ತಿದೆ. ನಗರದ ಹೊರ ವಲಯದಲ್ಲಿ ಅನಧಿಕೃತವಾಗಿ ಪಾರ್ಟಿಗಳನ್ನು ಆಯೋಜನೆ ಮಾಡುವುದು, ತಡರಾತ್ರಿ ಅಡ್ಡಾದಿಡ್ಡಿ ವಾಹನ ಚಾಲಯಿಸುವುದು, ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ಹದ್ದಿನ ಕಣ್ಣಿಡಲು ನಗರದ ಹಲವು ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿಗಳು ಕೂಡ ಸೂಚನೆ ಕೊಟ್ಟಿದ್ದಾರೆ. ಡಿಸೆಂಬರ್ 31ರ ರಾತ್ರಿ ನಗರದಲ್ಲಿ ಪೊಲೀಸರು ಗಸ್ತು ತಿರುಗಲಿದ್ದು ಹೊಸ ವರ್ಷಾಚರಣೆ ನೆಪದಲ್ಲಿ ಕಾನೂನು ಉಲ್ಲಂಘಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications