ತುಮಕೂರು : ಮಹಿಳೆ ವಂಚಿಸುತ್ತಿದ್ದ ಮಂತ್ರವಾದಿ ಬಂಧನ

ಬಂಧಿತ ನಕಲಿ ಮಂತ್ರವಾದಿಯನ್ನು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸೋಮ್ಲಾಪುರದ ನಿವಾಸಿ ಸುದರ್ಶನ್ (42) ಎಂದು ಗುರುತಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುಮಾರಸ್ವಾಮಿ ಮತ್ತು ಶೈಲಜಾ ದಂಪತಿಯನ್ನು ವಂಚಿಸಿದ್ದ ಈತ, ಶೈಲಜಾ ಅವರ ಒಡವೆಗಳನ್ನು ದೋಚಿದ್ದ ಮತ್ತು ಮಧ್ಯವರ್ತಿಗಳ ಸಹಾಯದಿಂದ ಅವರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂಬ ಆರೋಪಗಳಿವೆ.
ಸುದರ್ಶನ್ ಈ ಕೃತ್ಯಗಳಿಗೆ ಚೇಳೂರಿನ ಕಾಂತರಾಜು ಹಾಗೂ ಶಿವಮೊಗ್ಗದ ಕಾಶಿಪುರ ನಿವಾಸಿ ನವೀನ್ ಜೊತೆಯಾಗಿದ್ದರು. ಬುಧವಾರ ಮಧ್ಯರಾತ್ರಿ ಕ್ಯಾತಸಂದ್ರ ಪೊಲೀಸರು ಸುದರ್ಶನ್ ಅವರನ್ನು ಬಂಧಿಸಿದ ಬಳಿಕ, ಇಬ್ಬರು ತಲೆ ಮರಿಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. [ಮಂಡ್ಯ : ಬಾಲಕಿಗೆ ಹಿಂಸೆ ನೀಡಿದ್ದ ಮೌಲ್ವಿ ಬಂಧನ]
ನಕಲಿ ಮಾಂತ್ರಿಕನ ವಿವರ : ಸುದರ್ಶನ್ ಕೊಳ್ಳೇಗಾಲದಲ್ಲಿ ಮಾಟ-ಮಂತ್ರ ಮಾಡುವುದನ್ನು ಕಲಿತುಕೊಂಡು ಮಕ್ಕಳಿಲ್ಲದ ಮಹಿಳೆಯರನ್ನು ಗುರುತಿಸಿ ಅವರನ್ನು ಕರೆಸಿಕೊಂಡು ಮಂತ್ರದಿಂದ ಮಕ್ಕಳನ್ನು ಕರುಣಿಸುವುದಾಗಿ ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ. ಮಹಿಳೆಯರ ಆಭರಣವನ್ನು ದೋಚಿ ಅವರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುಮಾರಸ್ವಾಮಿ ಮತ್ತು ಅವರ ಪತ್ನಿ ಶೈಲಜಾ ದಂಪತಿಗೆ ಮದುವೆಯಾಗಿ 11 ವರ್ಷಗಳಾದರೂ ಅವರಿಗೆ ಮಕ್ಕಳಾಗಿರಲಿಲ್ಲ. ಅವರನ್ನು ಪರಿಚಯ ಮಾಡಿಕೊಂಡ ಈತ, ಅವರನ್ನು ತುಮಕೂರಿಗೆ ಕರೆಸಿಕೊಂಡು ಕೆಲವು ಪೂಜೆಗಳನ್ನು ಮಾಡಿ, ಅವರಿಬ್ಬರಿಗೂ ನಂಬಿಕೆ ಬರುವಂತೆ ಮಾಡಿದ್ದ.
ಶೈಲಜಾ ಅವರನ್ನು ಚೌಡೇಶ್ವರಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಿಶೇಷ ಪೂಜೆ ಮಾಡೋಣ ಎಂದು ಹೇಳಿದ್ದ. ನಂತರ ಅಲ್ಲಿಂದ ಅವರನ್ನು ಅಪಹರಿಸಿ, ಚಿಕ್ಕನಾಯಕನಹಳ್ಳಿ, ಶಿವಮೊಗ್ಗ ಮುಂತಾದ ಕಡೆ ಸುತ್ತಿಸಿ ಅವರ ಬಳಿ ಇದ್ದ 4 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದ.
ಮಾಂತ್ರಿಕ ಸುದರ್ಶನ್ ಬಗ್ಗೆ ಶೈಲಜಾ ಪತಿ ಕ್ಯಾತಸಂದ್ರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬುಧವಾರ ರಾತ್ರಿ ಸುದರ್ಶನ್ ಅನ್ನು ತುಮಕೂರಿನಲ್ಲಿ ಬಂಧಿಸಿದ್ದಾರೆ. ಇವನ ಇಬ್ಬರು ಸಹಚರರು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರೆದಿದೆ.











Click it and Unblock the Notifications