ರೈತರ ಮಕ್ಕಳನ್ನ ಮದುವೆಯಾಗುವ ಹೆಣ್ಣು ಮಕ್ಕಳಿಗೆ 2 ಲಕ್ಷ ಪ್ರೋತ್ಸಾಹ ಧನ: ಎಚ್‌ಡಿಕೆ ಆಫರ್
ರೈತರ ಮಕ್ಕಳ ಮದುವೆಯಾದರೆ ಎರಡು ಲಕ್ಷ ನೀಡುವ ಯೋಜನೆ ತರುವುದಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಬಿಗ್ ಆಫರ್ ಕೊಟ್ಟಿದ್ದಾರೆ.
ತುಮಕೂರು ಮಾರ್ಚ್ 9: ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಪ್ರಬಲ ಪಕ್ಷಗಳು ಮತಭೇಟೆಯನ್ನು ಆರಂಭಿಸಿವೆ. ಹಲವಾರು ಭರವಸೆಗಳ ಮೂಲಕ ಮತದಾರರನ್ನು ಸೆಳೆಯುವತ್ತ ಗಮನ ಹರಿಸಿದ ಪಕ್ಷಗಳ ಪ್ರಚಾರದ ಕಾರ್ಯ ಕೂಡ ಜೋರಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಂತರ ಜೆಡಿಎಸ್ ಕೂಡ ರೈತರಿಗೆ ಭರವಸೆ ನೀಡಿದೆ.
ರೈತರ ಮಕ್ಕಳನ್ನು ಮದುವೆಯಾಗುವ ಹುಡುಗಿಗೆ ಎರಡು ಲಕ್ಷ ಕೊಡುವ ಯೋಜನೆ ಜಾರಿಗೆ ತರುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ರಾಜ್ಯ ವಿದಾನಸಭಾ ಚುನಾವಣೆ ಬೆನ್ನಲ್ಲೆ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆಯನ್ನ ತುಮಕೂರಿನ ಹಾಲ್ಕುರಿಕೆ ಗ್ರಾಮದಲ್ಲಿ ಬುಧವಾರ ನಡೆಸಲಾಯಿತು.

ತಪಟೂರು ಕ್ಷೇತ್ರದ ಹಾಲ್ಕುರಿಕೆ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆಯ ಬೃಹತ್ ರೋಡ್ ಶೋ ಮೂಲಕ ನಡೆಯಿತು. ಈ ವೇಳೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು, 'ಹಳ್ಳಿ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡಲ್ಲ. ಹಾಗಾಗಿ ಹಳ್ಳಿಯ ರೈತರ ಮಕ್ಕಳ ಜೊತೆ ಮದುವೆಯಾದರೆ ಎರಡು ಲಕ್ಷ ರೂಪಾಯಿಯನ್ನು ಕೊಡುವ ಯೋಜನೆ ಜಾರಿಗೆ ತರ್ತೀವಿ. ಅದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಎರಡು ಲಕ್ಷ ರೂಪಾಯಿಯನ್ನು ಕೊಡುವುದಾಗಿ ಘೋಷಣೆ ಮಾಡುತ್ತೇವೆ ಎಂದು ತಿಪಟೂರಿನ ಪಂಚರತ್ನಯಾತ್ರೆಯಲ್ಲಿ ಭರವಸೆ ನೀಡಿದ್ದಾರೆ.
ಪಂಚರತ್ನ ರಥಯಾತ್ರೆ ಬಗ್ಗೆ
ಜೆಡಿಎಸ್‍ನ ಪಂಚರತ್ನ ರಥಯಾತ್ರೆ ಮತ್ತು ಜನ ಸಂಪರ್ಕ ಕಾರ್ಯಕ್ರಮ ತುಮಕೂರು ಜಿಲ್ಲೆಯ ತಿಪಟೂರಿನಿಂದ ಮಾ. 8ರಂದು ಮರು ಆರಂಭವಾಗಿದ್ದು, ಮಾ.26ರಂದು ಸಮಾರೋಪ ಸಮಾರಂಭ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಈಗಾಗಲೇ ರಾಜ್ಯ 75 ಕ್ಷೇತ್ರಗಳಲ್ಲಿ ಪೂರ್ಣಗೊಂಡಿದೆ. ಈಗ ಮತ್ತೆ 33 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ಈ ಯಾತ್ರೆ ಮೂಲಕ ಕುಮಾರಸ್ವಾಮಿ ಅವರ ಬಹು ನಿರೀಕ್ಷಿತ ಮಹತ್ವದ ಪಂಚ ಯೋಜನೆಗಳ ಬಗ್ಗೆ ಆಯಾ ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ.
123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಗುರಿಯೊಂದಿಗೆ ಈ ಚುನಾವಣಾ ಪ್ರಚಾರ ಆರಂಭಿಸಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ 93 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಎರಡನೇ ಹಂತದಲ್ಲಿ ಸುಮಾರು 60 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ. ಇನ್ನೊಂದು ವಾರದಲ್ಲಿ ಎರಡನೇ ಪಟ್ಟಿಯೂ ಬಿಡುಗಡೆ ಮಾಡುಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಯಾತ್ರೆಯ ಸಮಾರೋಪ ಸಮಾರಂಭ ಮಾರ್ಚ್ 26ಕ್ಕೆ
ಮಾ.8ರಿಂದ ತಿಪಟೂರಿನಿಂದ ಆರಂಭವಾದ ಪಂಚರತ್ನ ರಥಯಾತ್ರೆಯು ಹಾಸನ, ಬೆಂಗಳೂರು ನಗರ, ಚಾಮರಾಜನಗರ, ಮೈಸೂರು, ಕಲ್ಬುರ್ಗಿ ಜಿಲ್ಲೆಗಳಲ್ಲೂ ನಡೆಯಲಿದೆ. ಈ ಯಾತ್ರೆಯ ಸಮಾರೋಪ ಸಮಾರಂಭ ಮಾರ್ಚ್ 26ರಂದು ಮೈಸೂರಿನಲ್ಲಿ ಜರುಗಲಿದ್ದು, ಕುಂಬಳಗೋಡಿನಿಂದ ಪ್ರಾರಂಭವಾಗಿ ಮೈಸೂರಿನವರೆಗೆ ಸುಮಾರು 100 ಕೀ.ಮೀ ದೂರ ರೋಡ್ ಶೋ ಮಾಡಲಿದ್ದು, ಆ ರೋಡ್ ಶೋದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲು ಯೋಜಿಸಲಾಗಿದೆ.
ಸಮಾರೋಪದ ನಂತರವೂ ಯಾತ್ರೆ ಮುಂದುವರೆಯಲಿದೆ. ಒಟ್ಟಾರೆ ಅಂತಿಮ ಹಂತದಲ್ಲಿ 22 ಕ್ಷೇತ್ರಗಳಲ್ಲಿ 33 ದಿನಗಳ ಕಾಲ ಯಾತ್ರೆ ಸಾಗಲಿದೆ. ಮಾ. 27ರಂದು ಬ್ಯಾಟರಾಯನಪುರ, ಮಾ.28ರಿಂದ 30ರವರೆಗೆ ಯಶವಂತಪುರ ಕ್ಷೇತ್ರದಲ್ಲಿ ನಡೆಸಲಾಗುವುದು. ಮಾ.31ರಂದು ಬಸವನಗುಡಿ, ಏಪ್ರಿಲ್ ಒಂದರಂದು ಗೋವಿಂದರಾಜನಗರ, ಏ.2ರಂದು ಯಲಹಂಕ ಕ್ಷೇತ್ರದಲ್ಲಿ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ಏಪ್ರಿಲ್ 3ರಿಂದ 7ರವರೆಗೆ ಯಾತ್ರೆಗೆ ಬಿಡುವು ನೀಡಲಾಗಿದ್ದು, ಏ.8ರಂದು ಹಿರಿಯೂರು, ಏ.9ರಂದು ಚಳ್ಳಕೆರೆ ಕ್ಷೇತ್ರದಲ್ಲಿ ನಡೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications