ಸೋಮಣ್ಣ ಬಾಯಿಗೆ ಹೆದರಿ ನಮ್ಮನ್ನು ಬಲಿಕೊಟ್ರು: ಬಿಎಸ್‌ವೈ ವಿರುದ್ಧ ಮಾಧುಸ್ವಾಮಿ ಕೆಂಡಾಮಂಡಲ
ತುಮಕೂರು, ಮಾರ್ಚ್ 16:ಈ ಬಾರಿ ಲೋಕಸಭಾ ಚುನಾವಣಾ ಟಿಕೆಟ್ ಹಂಚಿಕೆಯಲ್ಲಿ ನಮ್ಮನ್ನೆಲ್ಲಾ ತೆಗೆದುಕೊಂಡು ಹೋಗಿ ಬಲಿ ಕೊಟ್ಟರು. ಸೋಮಣ್ಣನ ನಾಲಿಗೆಗೆ, ಸೋಮಣ್ಣನ ಬೈಗುಳಕ್ಕೆ ಹೆದರಿಕೊಂಡು ಯಡಿಯೂರಪ್ಪ ನನ್ನನ್ನು ಬಲಿ ಹಾಕಿದರು ಎಂದು ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನೋವಾಗಿದೆ. ಯಡಿಯೂರಪ್ಪ ಅವರಿಗೆ ಮಾಧುಸ್ವಾಮಿ, ಈಶ್ವರಪ್ಪನನ್ನು ಕಟ್ಟಿಕೊಂಡು ಏನಾಗಬೇಕು ಅಂತ ಅನ್ನಿಸಿರಬಹುದು. ಅಪ್ಪ ಮಕ್ಕಳಿಗೆ ಸ್ವ ಹಿತಸಕ್ತಿಯೇ ಹೆಚ್ಚಾಗಿರಬಹುದು. ನಾವು ನೆಮ್ಮದಿಯಾಗಿರಬಹುದು ಅಂತಾ ಎಂದುಕೊಂಡಿರಬಹುದು ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಯಡಿಯೂರಪ್ಪ ನನಗೆ ಹೇಳಿದ ಮೇಲೆ ನಾನು ಟಿಕೆಟ್ ಅಕಾಂಕ್ಷಿ ಅಂತ ಹೇಳಿದ್ದು. ನಿನಗೆ ಬಿ ಫಾರ್ಮ್ ತಂದು ಕೊಡುವ ಜವಾಬ್ದಾರಿ ನಂದೇ ಅಂತ ಯಡಿಯೂರಪ್ಪ ಹೇಳಿದ್ದರು. ನಾನು ದೆಹಲಿಗೆ ಹೋಗುತ್ತೇನೆ ಅಂತ ಹೇಳಿದ್ದೆ. ನೀನು ಯಾಕಪ್ಪ ಹೋಗ್ತಿಯಾ, ಹೋಗ್ಬೇಡಾ ಎಂದಿದ್ದರು. ಹಾಗಾಗಿಯೇ ನಾನು ಎಲ್ಲರ ಮುಂದೆ ನಾನೇ ತುಮಕೂರು ಬಿಜೆಪಿ ಅಭ್ಯರ್ಥಿ ಎಂದು ಧೃಡವಾಗಿ ಹೇಳುತ್ತಿದ್ದೆ. ನನಗೆ ಭರವಸೆ ಕೊಟ್ಟಿದ್ದಕ್ಕಾಗಿಯಾದರೂ ಯಡಿಯೂರಪ್ಪನವರು ಹೈಕಮಾಂಡ್ ಬಳಿ ಟಿಕೆಟ್‌ಗಾಗಿ ಹೋರಾಡಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ ಎಂದರು.
ಪಕ್ಷಕ್ಕೆ ಯಾರ್ಯಾರು ಅನ್ಯಾಯ ಮಾಡಿದರು, ಇವತ್ತು ಅವರೇ ದೊಡ್ಡವರಾಗಿದ್ದಾರೆ. ಇವತ್ತು ನಿಷ್ಠಾವಂತನಾಗಿ ದುಡಿದವರೇ ಲೆಕ್ಕಕ್ಕಿಲ್ಲ ಅಂದರೆ ನೋವು ಆಗಲ್ವಾ. ಪಕ್ಷದವರು ಗೌರವಯುತವಾಗಿ ವರ್ತಿಸದೇ ಇದ್ದರೆ ಹೇಗೆ. ನೋವು ಬಾದಿಸುತ್ತೆ ಅಲ್ವಾ..? ನಂಬಿದವರೇ ನಮಗೆ ಕೈ ಕೊಡ್ತಾರೆ ಅನ್ನೋ ನೋವು ಎಂದು ಹೇಳಿದರು.
ನಾನು ಬಿಜೆಪಿಗೆ ಹೋಗಬೇಕು ಅಂದ್ರೆ ಯಡಿಯೂರಪ್ಪ ಬಿಟ್ಟು ಬೇರೆ ಕಾರಣ ಇರಲಿಲ್ಲ. ಕೆಜಿಪಿ ಪಾರ್ಟಿ ಮಾಡಿದಾಗ ಯಡಿಯೂರಪ್ಪಗೆ ಶಕ್ತಿ ಕೊಡಬೇಕು ಅಂತ ಕೆಜೆಪಿಗೆ ಹೋದವರು ನಾವು. ಯಡಿಯೂರಪ್ಪ ಬದಲಾದಂಗೆ ಅವರ ಜೊತೆ ಹೋದ್ವಿ ಅದೇ ತಪ್ಪಾ..? ನಾವು ಎಂದೂ ಅವರನ್ನು ಪ್ರಶ್ನೆನೇ ಮಾಡಲಿಲ್ಲ. ಯಾಕೆ ಕೆಜಿಪಿ ಬಿಟ್ಟು ಬಿಜೆಪಿಗೆ ಹೋಗ್ತಿರಾ ಅಂತ ಕೇಳಲಿಲ್ಲ. ಲೀಡರ್ ಒಳ್ಳೆದೋ ಕೆಟ್ಟದೋ ಅವರನ್ನು ಫಾಲೋ ಮಾಡೋಣಾ ಅಂತ ಹೋದ್ವಿ. ಮನೆಲಿ ಕುಳಿತಿದ್ದವರನ್ನು ತಯಾರಾಗು ಅಂತ ಹೇಳಿ, ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ ಎಂದರು.
ಎರಡು ಮೂರು ಸಲ ಕರೆಸಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡು ಅಂದ್ರು. ನೀವು ತಯಾರಾಗಿ ಅಂತ ಹೇಳಿದ್ರು. ಈಗ ನಮ್ಮ ಪರ ಟಿಕೆಟ್ ಕೊಡಿಸಲಿಕ್ಕೆ ಹೋರಾಟ ಮಾಡಿಲ್ಲ ಅನ್ನೋದು ಬಹಳ ಮನಸ್ಸಿಗೆ ನೋವಾಗಿದೆ. ಇಷ್ಟೆಲ್ಲಾ ಆದ ಮೇಲೂ ನಮಗೆ ರಕ್ಷಣೆ ಇಲ್ಲ. ಇಲ್ಲಿ ಇರಬೇಕಾ ಬೇಡ್ವಾ ಎನ್ನುವ ಚಿಂತನೆ ಆಗಿದೆ. ಕಾರ್ಯಕರ್ತರನ್ನ ಕರೆದು ಯಾವ ದಿಕ್ಕಿನಲ್ಲಿ ಹೋದರೆ ಅನುಕೂಲ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುತ್ತೇವೆ ಎಂದರು.












Click it and Unblock the Notifications