Tumkur Airport: ತುಮಕೂರು ವಿಮಾನ ನಿಲ್ದಾಣಕ್ಕೆ 8000 ಎಕರೆ ಭೂಮಿ: ಡಾ. ಜಿ. ಪರಮೇಶ್ವರ್ ಮಹತ್ವದ ಹೇಳಿಕೆ
ತುಮಕೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ತಪ್ಪಿಸುವ ಸಲುವಾಗಿ ತುಮಕೂರು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡುವ ಬಗ್ಗೆ ಪ್ರಸ್ಥಾಪ ಸಲ್ಲಿಸಲಾಗಿದೆ ಎಂದು ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಅವರು, ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದರು. ಬಳಿಕ ನಡೆದ ಮಾಧ್ಯಮಗೋಷ್ಠೊಯಲ್ಲಿ ವಿವರಣೆ ನೀಡಿದರು.

ಬೆಂಗಳೂರು ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಪ್ರತಿ ವರ್ಷ 1 ಕೋಟಿಗೂ ಹೆಚ್ಚು ಪ್ರಯಾಣಿಕರು ಈ ವಿಮಾನ ನಿಲ್ದಾಣ ಬಳಕೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದ್ದು ಪರ್ಯಾಯ ವಿಮಾನ ನಿಲ್ದಾಣದ ಅಗತ್ಯ ಇದೆ ಎಂದರು.
ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಎರಡು ವಿಮಾನ ನಿಲ್ದಾಣಗಳಿವೆ. ಬೆಂಗಳೂರು ಕೂಡ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ಮತ್ತೊಂದು ವಿಮಾನ ನಿಲ್ದಾಣಕ್ಕೆ ಭೂಮಿ ಗುರುತಿಸಿ ಈಗಾಗಲೇ ಕೆಐಎಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
8000 ಎಕರೆ ಭೂಮಿ
ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ 8000 ಎಕರೆ ಭೂಮಿ ಗುರುತಿಸಲಾಗಿದೆ. ಕೊರಟಗೆರೆ, ತುಮಕೂರು, ಮಧುಗಿರಿ, ಶಿರಾ ತಾಲೂಕುಗಳ ಮಧ್ಯಭಾಗದಲ್ಲಿ ಜಾಗ ಗುರುತಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಪ್ರಾಥಮಿಕ ಹಂತದ ಚರ್ಚೆಯಾಗಿತ್ತು, ಈಗ ಜಾಗ ಗುರುತಿಸಲಾಗಿದೆ ಎಂದರು.
ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ವೇಗ
ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರನ್ನು ಅಭಿವೃದ್ಧಿ ಮಾಡುವ ಬಗ್ಗೆ ಮೊದಲಿನಿಂದಲೂ ಕೂಗು ಕೇಳಿಬಂದಿತ್ತು. ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗುತ್ತಿದ್ದು, ವಿಮಾನ ನಿಲ್ದಾಣ ಬಂದರೆ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯಲಿದೆ ಎನ್ನಲಾಗಿದೆ.
ಈಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಿರುವ ಭೂಮಿಯು ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸನಿಹವಾಗಿದೆ. ಕೆಐಎಡಿಬಿ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ ನೀಡಿದರೆ, ಈ ಭಾಗದಲ್ಲಿ ವಿಮಾನ ನಿಲ್ದಾಣ ಬರುವುದು ಖಚಿತವಾಗಲಿದೆ.
ಈ ಭಾಗದಲ್ಲಿ ಈಗಾಗಲೇ ವಿಮಾನ ನಿಲ್ದಾಣ ಬರುವ ಸಾಕಷ್ಟು ಸುದ್ದಿಗಳು ಹಬ್ಬಿದ್ದು, ಜಮೀನು ಬೆಲೆ ಗಗನಕ್ಕೇರುತ್ತಿದೆ. ಶೀಬಿ ಅಗ್ರಹಾರ, ಕಾಳೇನಹಳ್ಳಿ, ಹಾಲದೊಡ್ಡೇರಿ, ಗಿಡಗನಹಳ್ಳಿ, ಚಿಕ್ಕಣ್ಣನಹಳ್ಳಿ, ಸೂರೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳು ಸದ್ಯ ಗುರುತಿಸಿರುವ ಭೂ ಪ್ರದೇಶದಲ್ಲಿವೆ. ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ, ಕೆಐಎಡಿಬಿ ಒಪ್ಪಿಗೆ ನೀಡಿದ ಬಳಿಕ ಖಚಿತ ಮಾಹಿತಿ ತಿಳಿಯಲಿದೆ.












Click it and Unblock the Notifications