Tumakuru Bandh: 'ಹೇಮಾವತಿ'ಗಾಗಿ ಬಂದ್ ಆಗಲಿದೆ ತುಮಕೂರು.. ಏನಿರುತ್ತೆ.. ಏನಿರಲ್ಲ?
ತುಮಕೂರು, ಜೂನ್. 25: ಕಲ್ಪತರು ಜಿಲ್ಲೆಯ ಜೀವನಾಡಿ ಹೇಮಾವತಿ (Hemavati River) ನೀರನ್ನು ಕುಣಿಗಲ್ ಮೂಲಕ ಮಾಗಡಿಗೆ ಕೊಂಡೊಯ್ಯುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಜೂನ್ 25ರಂದು (ಮಂಗಳವಾರ) ತುಮಕೂರು ಜಿಲ್ಲೆ ಬಂದ್‌ಗೆ ಹೋರಾಟ ಸಮಿತಿ ಕರೆ ನೀಡಿದೆ.
ಇಂದಿನ ಬಂದ್‌ಗೆ ವಿವಿಧ ರೈತಪರ, ಕನ್ನಡಪರ ಸಂಘಟನೆಗಳು, ಮಠಾಧೀಶರು, ವರ್ತಕರು, ವಕೀಲರ ಸಂಘ, ಹೋಟೆಲ್ ಅಸೋಸಿಯೇಷನ್ ಸೇರಿ ಹಲವು ಸಂಘಟನೆಗಳಿಂದ ಬೆಂಬಲ ಸಿಕ್ಕಿದೆ. ನಗರದ ಟೌನ್‌ಹಾಲ್‌ನಿಂದ ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸಮಿತಿ ತಿಳಿಸಿದೆ.

ನದಿ ನೀರಿಗಾಗಿ ತುಮಕೂರು- ರಾಮನಗರ ಕಿತ್ತಾಟ!
ಹೇಮಾವತಿ ನದಿಯ ಗೊರೂರು ಡ್ಯಾಮ್ ನೀರಿಗಾಗಿ ತುಮಕೂರು ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯ ನಡುವೆ ಕಿತ್ತಾಟ ಶುರುವಾಗಿದೆ. ಕೆನಾಲ್ ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಶ್ರೀರಂಗ ಏತನೀರಾವರಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿದೆ.
ಇಡೀ ತುಮಕೂರು ಜಿಲ್ಲೆ ಬಂದ್‌ಗೆ ಕರೆ ನೀಡಿ, ಗುಬ್ಬಿ ತಾಲೂಕು ಬಂದ್ ಯಶ್ವಸ್ವಿಯಾಗಿ ನಡೆಸಲು ಹೋರಾಟ ಸಮಿತಿಯ ಎಲ್ಲ ಮುಖಂಡರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಸಭೆ ನಡೆಸಿದೆ. ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿದ್ದರು. ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡುವಂತೆ ಸಮಿತಿ ಮನವಿ ಮಾಡಿದೆ.

ಕಳೆದ ಮೂವತ್ತು ವರ್ಷದ ಹಿಂದೆ ಹೇಮಾವತಿ ನೀರು ತರಲು ನಡೆಸಿದ ತೀವ್ರ ಹೋರಾಟದ ಮಾದರಿಯಲ್ಲೇ ಈಗ ನೀರು ಉಳಿಸಿಕೊಳ್ಳಲು ಹೋರಾಟ ನಡೆಸಲು ನಿರ್ಧರಿಸಲಾಗಿದೆ. ತುಮಕೂರು ನಗರ ಸೇರಿದಂತೆ 10 ತಾಲೂಕುಗಳಲ್ಲಿ ಬಂದ್‌ಗೆ ಸಿದ್ಧತೆ ಮಾಡಲಾಗಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಲಿದ್ದಾರೆ.
ಶಾಲಾ ಕಾಲೇಜಿಗಿಲ್ಲ ರಜೆ
ತುಮಕೂರು ಬಂದ್ ಹಿನ್ನೆಲೆ ಸ್ವಯಂ ಪ್ರೇರಿತ ಬಂದ್ ಇರಲಿದೆ. ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್‌ಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ. ಆಟೋಗಳು ರಸ್ತೆಗಿಳಿಯುವುದು ಅನುಮಾನವಾಗಿದ್ದು, ಬಹುತೇಕ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು ಬಾಗಿಲು ತೆರೆಯುವುದಿಲ್ಲ ಎನ್ನಲಾಗಿದೆ.
ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಬಂದ್ ಇರಲಿದೆ. ಆದರೆ, ಸರ್ಕಾರಿ ಸಾರಿಗೆ, ಶಾಲಾ-ಕಾಲೇಜು ಸೇರಿದಂತೆ ಸರಕಾರಿ ಸೇವೆಗಳು ಎಂದಿನಂತೆ ಇರಲಿವೆ ಎಂದು ಆಡಳಿತ ಸ್ಪಷ್ಟಪಡಿಸಿದೆ. ಆದರೆ ಅನುದಾನರಹಿತ ಶಾಲೆಗಳ ಒಕ್ಕೂಟ (ರೂಪ್ಸಾ) ಬಂದ್‌ಗೆ ಬೆಂಬಲ ಸೂಚಿಸಿದ್ದು, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ.












Click it and Unblock the Notifications