ತುಮಕೂರಿನಲ್ಲಿ ಏ.1ರಂದು ಸಿದ್ದಗಂಗಾ ಶ್ರೀಗಳಿಗೆ ಗುರುವಂದನೆ
ತುಮಕೂರು, ಮಾ. 29 : ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳು ಏ.1ಕ್ಕೆ 108ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದ್ದರಿಂದ ಮಠದ ಭಕ್ತರ ಸಮಿತಿ ವತಿಯಿಂದ ಬೃಹತ್ ಜನಾಭಿವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಕ್ತರ ಸಮಿತಿ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು ಜನಾಭಿವಂದನೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದು, ತುಮಕೂರು ನಗರದ ರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಏ.1 ರ ಸಂಜೆ 5 ಗಂಟೆಗೆ ಜನಾಭಿವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. [ಲೋಕ ಜಂಗಮ: ಸಿದ್ದಗಂಗಾಶ್ರೀ ಸಾಕ್ಷ್ಯಚಿತ್ರ ಲೋಕಾರ್ಪಣೆ]

ಏ.1ರಂದು 108ನೇ ವಸಂತಕ್ಕೆ ಶ್ರೀಗಳು ಪಾದಾರ್ಪಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಅಂತಹ ಪೂಜ್ಯರಿಗೆ ಎಲ್ಲಾ ಸಮುದಾಯವರ್ಗದ ಭಕ್ತರು ಒಂದೆಡೆ ಸೇರಿ ಜನಾಭಿವಂದನೆ ಸಲ್ಲಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಜನಾಭಿವಂದನೆ ಕಾರ್ಯಕ್ರಮದಲ್ಲಿ ಸಿರಿಗೆರೆ ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಸಾಹಿತಿ ಡಾ.ಹಂಪನಾಗರಾಜಯ್ಯ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ವೇದಿಕೆಯಲ್ಲಿ ಸ್ವಾಮೀಜಿಗಳಿಗೆ ಮಾತ್ರ ಅವಕಾಶ : ಜನಾಭಿವಂದನೆ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಳ್ಳಲಿದ್ದು, ರಾಜಕೀಯ ನಾಯಕರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತದೆ. ಆದರೆ, ವೇದಿಕೆ ಮೇಲೆ ಸ್ವಾಮೀಜಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.
ಬೆಂಗಳೂರಿನಿಂದ ಬೈಕ್ ಜಾಥಾ : ತುಮಕೂರು ನಗರದ ಎಂಟು ದಿಕ್ಕುಗಳಿಂದ ಶ್ರೀಗಳ ಭಾವಚಿತ್ರದ ರಥಯಾತ್ರೆಯ ಮೆರವಣಿಗೆ ಸರ್ಕಾರಿ ಕಾಲೇಜು ಮೈದಾನಕ್ಕೆ ಬಂದು ಸೇರಲಿದೆ. ಬೆಂಗಳೂರಿನಿಂದ ತುಮಕೂರಿಗೆ ಜ್ಞಾನ ದಾಸೋಹ ಸಮಿತಿ 108 ಜನರ ಬೈಕ್ ಜಾಥಾವನ್ನು ಅಂದು ಹಮ್ಮುಕೊಂಡಿದ್ದಾರೆ.












Click it and Unblock the Notifications