ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಬಗ್ಗೆ ಮತ್ತೊಂದು ಬಿಗ್ ಅಪ್ಡೇಟ್
Indian Railways: ರಾಜ್ಯದಲ್ಲಿ ರೈಲ್ವೇ ವಿಭಾಗದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಇದೀಗ ಬಹುನಿರೀಕ್ಷಿತ ದಾವಣಗೆರೆ-ಚಿತ್ರದುರ್ಗ-ತುಮಕೂರು ಹೊಸ ರೈಲ್ವೆ ಮಾರ್ಗ ಯೋಜನೆ ಕಾಮಗಾರಿ ಬಗ್ಗೆ ಬಿಗ್ ಅಪ್ಡೇಟ್‌ವೊಂದು ಲಭ್ಯವಾಗಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಚಿವ ವಿ.ಸೋಮಣ್ಣ ಅವರು ಆಗಾಗ ಈ ಬಹುನಿರೀಕ್ಷಿತ ಹೊಸ ರೈಲು ಮಾರ್ಗ ಕಾಮಗಾರಿ ಬಗ್ಗೆ ಅಪ್ಡೇಟ್ಸ್ ಕೊಡುತ್ತಲಿರುತ್ತಾರೆ. ಇದೀಗ ಸಚಿವ ಎಂ.ಬಿ.ಪಾಟೀಲ್ ಮತ್ತೊಂದು ಮಹತ್ವದ ಅಪ್ಡೇಟ್‌ವೊಂದನ್ನು ನೀಡಿದ್ದಾರೆ. ಅದೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ತುಮಕೂರು-ರಾಯದುರ್ಗ ನಡುವೆ ರೈಲು ಹಳಿ ಜೋಡಣೆ ಕಾರ್ಯ ಮುಂದುವರೆದಿದೆ. ತುಮಕೂರು-ಊರುಕೆರೆ ಮತ್ತು ದೊಡ್ಡಹಳ್ಳಿ-ಪಾವಗಡ ನಡುವೆ ಇದೇ ವರ್ಷ 27 ಕಿಲೋ ಮೀಟರ್ ಕಾಮಗಾರಿ ಮುಕ್ತಾಯ ಆಗಲಿದೆ. ತುಮಕೂರು-ಊರುಕೆರೆ ನಡುವೆ ತುಂಬಾ ಕೈಗಾರಿಕೆಗಳು ಇವೆ. ಈ ಹಿನ್ನೆಲೆ ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ಜನ ಓಡಾಡುತ್ತಾರೆ.
ಮತ್ತೊಂದೆಡೆ, ದೊಡ್ಡಹಳ್ಳಿ-ಪಾವಗಡ ನಡುವಿನ 20 ಕಿಲೋ ಮೀಟರ್ ಮಾರ್ಗದಲ್ಲಿ 2026ರ ಜನವರಿಯಿಂದ ರೈಲು ಸಂಚಾರ ಮಾಡಲಿದೆ. ಮಡಕಶಿರಾ-ಪಾವಗಡ ನಡುವಿನ ಕಾಮಗಾರಿ 2026ರ ಡಿಸೆಂಬರ್ ವೇಳೆಗೆ, ಮಧುಗಿರಿ-ಪಾವಗಡ ಮಾರ್ಗದಲ್ಲಿ ಹಳಿ ಜೋಡಣೆಯು 2028ರ ಫೆಬ್ರವರಿ ವೇಳೆಗೆ ಮುಕ್ತಾಯ ಆಗಲಿದೆ ಎಂದು ಎಂಬಿ ಪಾಟೀಲ್ ಅವರು ಹೇಳಿದ್ದಾರೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗದ ಊರುಕೆರೆ-ತಿಮ್ಮರಾಯನಹಳ್ಳಿ ನಡುವೆ 13 ಕಿಲೋ ಮೀಟರ್ ಹಳಿ ಜೋಡಣೆ ಇದೇ ತಿಂಗಳು ಮುಕ್ತಾಯ ಆಗಲಿದೆ. ಭರಮಸಾಗರ-ಹೆಬ್ಬಾಳು, ಹೆಬ್ಬಾಳು-ತೋಳಹುಣಸೆ ನಡುವೆ 2026ರ ಫೆಬ್ರವರಿ ಅಂತ್ಯದೊಳಗೆ ಹಳಿ ಜೋಡಣೆ ಆಗಲಿದೆ ಎಂದು ಹೇಳಿದ್ದಾರೆ.
ಇನ್ನೂ ಈ ಹೊಸ ರೈಲ್ವೆ ಮಾರ್ಗ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ 549.45 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಈ ಮಾರ್ಗದ ಉದ್ದ ಒಟ್ಟು 191 ಕಿಲೋ ಮೀಟರ್ ಆಗಿದೆ. ಹಳೇ ಮಾರ್ಗದಲ್ಲಿ ತುಮಕೂರು-ದಾವಣಗೆರೆ ಹಾಗೂ ದಾವಣಗೆರೆ-ತುಮಕೂರಿಗೆ ಅರಸಿಕೆರೆ ಜಂಕ್ಷನ್ ಮೇಲೆ ಸುತ್ತುವರಿದುಕೊಂಡು ಹೋಗಬೇಕಿತ್ತು. ಇದರಿಂದ ತುಂಬಾ ಸಮಯ ಬೇಕಾಗುತ್ತಿತ್ತು. ಆದರೆ, ಹೊಸ ಮಾರ್ಗದಿಂದ ಅಂತರ ಹಾಗೂ ಸಮಯ ಎರಡು ಕಡಿಮೆಯಾಗಲಿದೆ.
ಈ ಹೊಸ ಮಾರ್ಗ ಊರುಕೆರೆ, ತಿರುಮೇನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ಸಿರಾ, ತಾವರಕೆರೆ, ಅನಿಸಿದ್ರಿ, ಹಿರಿಯೂರು, ಮೇಟಿಕುರಿಕೆ, ಐಮಂಗಳ, ಪಳವನಹಳ್ಳಿ, ಚಿತ್ರದುರ್ಗ, ಸಿರಿಗೆರೆ, ಹೆಬ್ಬಾಳು, ತೋಳಹುಣುಸೆಲ್ಲಿ ನಿಲ್ದಾಣಗಳನ್ನು ಒಳಗೊಂಡಿರಲಿದೆ ಎನ್ನುವ ಮಾಹಿತಿ ಇದೆ.
ಕೋವಿಂದ ಕಾರಜೋಳ ಕೊಟ್ಟ ಅಪ್ಡೇಟ್: ಇನ್ನೂ ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ 2027ರ ಒಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಗೋವಿಂದ ಕಾರಜೋಳ ಇತ್ತೀಚೆಗಷ್ಟೇ ಹೇಳಿದ್ದರು. ದಾವಣಗೆರೆ-ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಆದರೆ, ಚಿತ್ರದುರ್ಗ ಭಾಗದಲ್ಲಿ ಕಾಮಗಾರಿ ಮಂದಗತಿಯಲ್ಲಿ. ಭೂ ಸ್ವಾಧೀನ ಪ್ರಕ್ರಿಯೆ ವಿಳಂಬ ಆಗುತ್ತಿರುವ ಹಿನ್ನೆಲೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ ಎಂದು ಹೇಳಿದ್ದರು.
ಒಂದು ವೇಳೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದ್ರೆ ಉತ್ತರ ಕರ್ನಾಟಕದ ಕಡೆಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ತುಂಬಾ ಅನೂಕೂಲ ಆದಂತಾಗಲಿದೆ. ಸುತ್ತುವರಿದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಮತ್ತೊಂದೆಡೆ ಪ್ರತಿನಿತ್ಯ ಕಾರ್ಖನೆಗಳಿಗೆ ಹೋಗುವವರಿಗೂ ತುಂಬಾ ಸಹಾಯಕ ಆಗಲಿದೆ. ಯಾಕಂದ್ರೆ ಸಮಯದ ಉಳಿತಾಯ ಹಾಗೂ ವೆಚ್ಚ ಕೂಡ ಕಡಿಮೆ ಆಗಲಿದೆ.












Click it and Unblock the Notifications