ಸ್ಮಶಾನ ಜಾಗವಿಲ್ಲದೇ ರಸ್ತೆಯಲ್ಲೇ ಶವ ಇಟ್ಟುಕೊಂಡು ಕೂತ ದಲಿತರು
ತುಮಕೂರು, ಜೂ 6: ದಲಿತರಿಗೆ ಸೂಕ್ತ ಸ್ಮಶಾನ ಜಾಗ ಇಲ್ಲದೆ ಸತ್ತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲು ರಸ್ತೆಯಲ್ಲೆ ಮೃತದೇಹ ಇಟ್ಟುಕೊಂಡು ಕಾದು ಕುಳಿತ ಘಟನೆ ಕುಣಿಗಲ್ ತಾಲೂಕಿನ ಎಡೆಯೂರು ಹೋಬಳಿಯ ನಾಗೇಗೌಡನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿನ ಹನುಮಂತ ಎಂಬಾತ ಮೃತಪಟ್ಟಿದ್ದು, ಅಂತ್ಯಕ್ರಿಯೆಗೆ ಜಾಗವಿಲ್ಲದ ಕಾರಣ ಮನೆಯವರು ಮೃತದೇಹವನ್ನು ರಸ್ತೆಯಲ್ಲೆ ಇಟ್ಟುಕೊಂಡಿದ್ದರು. ಮೃತದೇಹ ಹೂಳಲು ಸೂಕ್ತ ಸ್ಮಶಾನದ ಸ್ಥಳಾವಕಾಶ ಕಲ್ಪಿಸದೇ ಇದ್ದಲ್ಲಿ ರಸ್ತೆಯಲ್ಲೇ ಅನಿವಾರ್ಯವಾಗಿ ಅಂತ್ಯಕ್ರಿಯೆ ನಡೆಸಬೇಕಾಗುತ್ತದೆ ಎಂದು ಮೃತನ ಸಂಬಂಧಿಕರು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.
ಮುಖಂಡ ವೆಂಕಟೆಶ್ ಮಾತನಾಡಿ, ಈ ಹಿಂದೆ ಮೃತಪಟ್ಟರೆ ಖಾಸಗಿ ಜಮೀನಿನಲ್ಲಿ ಅಥವಾ ಕೆರೆ ಅಂಗಳದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು, ಈಗ ಕೆರೆಯಲ್ಲಿ ನೀರು ತುಂಬಿದೆ, ಖಾಸಗಿ ಜಮೀನಿನವರು ಬೆಳೆ ಇಟ್ಟಿದ್ದೇವೆ ಎನ್ನುತ್ತಾರೆ, ತಾಲೂಕು ಆಡಳಿತ, ಗ್ರಾಮ ಪಂಚಾಯಿತಿಗೆ ಮನವಿ ನೀಡಿದರೂ ಯಾವುದೇ ಕ್ರಮವಾಗಿಲ್ಲ, ಹೀಗಾಗಿ ಅಂತ್ಯಕ್ರಿಯೆ ಮಾಡಲು ಜಾಗವಿಲ್ಲದೆ ರಸ್ತೆಯಲ್ಲೆ ಮೃತದೇಹ ಇಟ್ಟುಕೊಂಡು ಕಾಯುವಂತಾಗಿದೆ. ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಂದಾಯ ಇಲಾಖೆಯ ರಾಜಸ್ವನಿರೀಕ್ಷಕರು ಈ ಹಿಂದೆ ಗುರುತಿಸಿದ್ದ ಜಾಗದಲ್ಲೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕುಟುಂಬದವರು ಮುಂದಿನ ಕಾರ್ಯಕ್ಕೆ ಮುಂದಾದರು.
ಚಿರತೆ ದಾಳಿಗೆ 8ಕ್ಕೂ ಹೆಚ್ಚು ಕುರಿಗಳು ಬಲಿ:
ಗುಬ್ಬಿ ತಾಲೂಕಿನ ದೊಡ್ಡ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಭಾನುವಾರ ತಡ ರಾತ್ರಿ ಚಿರತೆಯ ದಾಳಿಗೆ 8 ಕ್ಕೂ ಹೆಚ್ಚು ಕುರಿಗಳು ಬಲಿಯಾಗಿವೆ.
ಶಿವಣ್ಣ ಎಂಬ ರೈತರಿಗೆ ಸೇರಿದ್ದ ರೂಪ್ಪದಲ್ಲಿ ಕಟ್ಟಿದಂತಹ ಕುರಿಗಳ ಮೇಲೆ ಚಿರತೆಯೊಂದು ದಾಳಿ ಮಾಡಿರುವಂತಹ ಘಟನೆ ನಡೆದಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದು ಶಿವಣ್ಣ ಮಾಹಿತಿ ನೀಡಿದರು.

ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಭೇಟಿ ನೀಡಿ ಸರ್ಕಾರದಿಂದ ಬರಬೇಕಾದ ಅಂತಹ ಪರಿಹಾರದ ಹಣವನ್ನು ನೀಡಲಾಗುತ್ತದೆ. ಗುಬ್ಬಿ, ಕುಣಿಗಲ್ ಗಡಿಭಾಗದಲ್ಲಿ ಚಿರತೆಗಳು ಕಂಡುಬರುತ್ತಿವೆ ಅವುಗಳನ್ನು ಹಿಡಿಯಲು ಸಹ ಬೋನಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ತಿಳಿಸಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications