Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ
Copra Price: ಕಲ್ಪತರು ನಾಡು ಅಂತಲೇ ಕರೆಯಲ್ಪಡುವ ತುಮಕೂರು ಜಿಲ್ಲೆಯ ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ದರವು ಮತ್ತೊಮ್ಮೆ ಸಾರ್ವಕಾಲಿಕ ದಾಖಲೆ ಬರೆದಿದೆ. ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೊಬ್ಬರಿ ಧಾರಣೆಯು ಪ್ರತಿ ಕ್ವಿಂಟಲ್‌ಗೆ ಬರೋಬ್ಬರಿ ₹32,218ರಂತೆ ಮಾರಾಟವಾಗುವ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ.
ಈ ಅನಿರೀಕ್ಷಿತ ದರ ಏರಿಕೆಯ ಹಿಂದೆ ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿಯ ಪ್ರಮಾಣದಲ್ಲಿನ ಭಾರಿ ಕುಸಿತ ಪ್ರಮುಖ ಪಾತ್ರ ವಹಿಸಿದೆ. ಸಾಮಾನ್ಯವಾಗಿ ಪ್ರತಿ ಹರಾಜಿನ ದಿನ ಸುಮಾರು 3,000 ಕ್ವಿಂಟಲ್‌ಗಿಂತಲೂ ಹೆಚ್ಚು ಕೊಬ್ಬರಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈ ಬಾರಿ ಕೇವಲ 1,621 ಕ್ವಿಂಟಲ್ ಮಾತ್ರ ಬಂದಿದೆ. ರೈತರ ಬಳಿ ಸದ್ಯ ಹಳೆಯ ಕೊಬ್ಬರಿಯ ದಾಸ್ತಾನು ಇಲ್ಲದಿರುವುದು ಮತ್ತು ಹೊಸ ಕೊಬ್ಬರಿ ಆಗಮನದ ವಿಳಂಬವು ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಹರಾಜಿನಲ್ಲಿ ಕೊಬ್ಬರಿ ದರಗಳ ವಿವರ
* ಗರಿಷ್ಠ ದರ: ₹32,218 (ಕ್ವಿಂಟಲ್‌ಗೆ)
* ಮಾದರಿ ದರ: ₹31,860
* ಕನಿಷ್ಠ ದರ: ₹30,000
ಬೆಲೆ ಏರಿಕೆಗೆ ಪ್ರಮುಖ ಕಾರಣಗಳು
ಕಳೆದ ವರ್ಷ ಜೂನ್ 30ರಂದು ಪ್ರತಿ ಕ್ವಿಂಟಲ್‌ಗೆ ₹31,606ಕ್ಕೆ ಮಾರಾಟವಾಗಿದ್ದೇ ಈವರೆಗಿನ ಗರಿಷ್ಠ ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನು ಮುರಿದು ಕೊಬ್ಬರಿ ದರ ಹೊಸ ದಾಖಲೆ ಬರೆದಿದೆ. ಈ ಬೆಲೆ ಏರಿಕೆಯ ಹಿಂದೆ ಪ್ರಮುಖವಾಗಿ ಆವಕದ ಕೊರತೆ ಎದ್ದು ಕಾಣುತ್ತಿದೆ.
* ಸಾಮಾನ್ಯವಾಗಿ ಪ್ರತಿ ಹರಾಜಿನ ದಿನ ಸುಮಾರು 3 ಸಾವಿರ ಕ್ವಿಂಟಲ್‌ಗೂ ಹೆಚ್ಚು ಕೊಬ್ಬರಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಸೋಮವಾರ ಕೇವಲ 1,621 ಕ್ವಿಂಟಲ್ ಮಾತ್ರ ಬಂದಿದೆ.
* ರೈತರ ಬಳಿ ಸದ್ಯ ಕೊಬ್ಬರಿಯ ದಾಸ್ತಾನು ಇಲ್ಲದಿರುವುದು ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆಯಾಗಲು ಕಾರಣವಾಗಿದೆ.
* ಮಾರುಕಟ್ಟೆಯಲ್ಲಿ ಎಳನೀರಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಹೆಚ್ಚಿನ ರೈತರು ಕಾಯಿ ಒಣಗಿಸಿ ಕೊಬ್ಬರಿ ಮಾಡುವ ಬದಲು ಎಳನೀರನ್ನೇ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೊಬ್ಬರಿ ಉತ್ಪಾದನೆ ಗಣನೀಯವಾಗಿ ಇಳಿದಿದೆ.
ವರ್ತಕರು ಹೇಳುವುದೇನು?
ಈ ಬಾರಿ ಅವಧಿಗೂ ಮುನ್ನವೇ ಬೆಲೆ 31,000 ರೂಪಾಯಿ ದಾಟಿದೆ. ಸಾಮಾನ್ಯವಾಗಿ ಜೂನ್ ತಿಂಗಳಿನಿಂದ ದೀಪಾವಳಿ ಸಮಯದವರೆಗೆ ಬೆಲೆ ಏರಿಕೆ ಆಗುತ್ತಿತ್ತು. ಆದರೆ ಈ ಬಾರಿ ಅದಕ್ಕೂ ಮುನ್ನವೇ ₹32 ಸಾವಿರದ ಗಡಿ ದಾಟಿರುವುದು ರೈತರಲ್ಲಿ ಹರ್ಷ ತಂದಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನು ಹೆಚ್ಚಾಗಬಹುದು ಎಂದು ವರ್ತಕರು ಹೇಳುತ್ತಿದ್ದಾರೆ. ಉತ್ತರ ಭಾರತದ ರಾಜ್ಯಗಳಿಂದ ಬೇಡಿಕೆ ಹೆಚ್ಚಿಲ್ಲದಿದ್ದರೂ, ಮಾರುಕಟ್ಟೆಗೆ ಕೊಬ್ಬರಿ ಬರುತ್ತಿರುವ ಪ್ರಮಾಣ ತೀರಾ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಅಂತಲೂ ಹೇಳುತ್ತಿದ್ದಾರೆ.
ಸಾಮಾನ್ಯವಾಗಿ ಜೂನ್ ಮತ್ತು ಅಕ್ಟೋಬರ್ ನಡುವೆ ಬೆಲೆ ಏರಿಕೆ ಕಾಣುತ್ತದೆ. ಆದರೆ ಈ ಬಾರಿ ಏಪ್ರಿಲ್‌ನಲ್ಲೇ ₹32 ಸಾವಿರ ದಾಟಿರುವುದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ದೀಪಾವಳಿ ವೇಳೆಗೆ ಬೆಲೆ ₹35,000ದಿಂದ ₹38,000 ತಲುಪಬಹುದು ಎಂಬ ವರ್ತಕರ ಲೆಕ್ಕಾಚಾರಕ್ಕೆ ಪುಷ್ಟಿ ನೀಡಿದೆ.
ತಿಪಟೂರು ಕೊಬ್ಬರಿಯ ವಿಶೇಷತೆ ಏನು?
ತಿಪಟೂರಿನ ಉಂಡೆ ಕೊಬ್ಬರಿ ತನ್ನ ರುಚಿ ಮತ್ತು ದೀರ್ಘಕಾಲ ಬಾಳಿಕೆ ಬರುವ ಗುಣಕ್ಕೆ ಹೆಸರುವಾಸಿ. ಇಲ್ಲಿನ ಮಣ್ಣಿನ ಗುಣಲಕ್ಷಣಗಳಿಂದಾಗಿ ಈ ಕೊಬ್ಬರಿಗೆ 'ಜಿಐ ಟ್ಯಾಗ್' ಪಡೆಯುವ ಅರ್ಹತೆ ಇದೆ ಎಂದು ತಜ್ಞರು ಹೇಳುತ್ತಾರೆ. ಇದೇ ಕಾರಣಕ್ಕೆ ಸಿಹಿ ತಿನಿಸುಗಳ ತಯಾರಿಕೆಯಲ್ಲಿ ತಿಪಟೂರು ಕೊಬ್ಬರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಒಟ್ಟಿನಲ್ಲಿ ಕೊಬ್ಬರಿ ಬೆಲೆ ಏರಿಕೆಯು ತೆಂಗು ಬೆಳೆಗಾರರ ಪಾಲಿಗೆ ಸಂಕಷ್ಟದ ದಿನಗಳು ದೂರವಾಗಿರುವ ಸಂಕೇತವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಕಾಯಿ ಇಲ್ಲದಿರುವುದು ರೈತರಿಗೆ ಒಂದೆಡೆ ಬೇಸರ ತರಿಸಿದ್ದರೆ, ದರ ಏರಿಕೆಯು ಸಂತಸ ತಂದಿದೆ.












Click it and Unblock the Notifications