ತುಮಕೂರು 'ಕೈ' ಬಿಟ್ಟಿದ್ದಕ್ಕೆ ನಾಯಕರಲ್ಲಿ ಅತೃಪ್ತಿ, ಹೈಕಮಾಂಡ್‌ಗೆ ದೂರು ಸಾಧ್ಯತೆ
ತುಮಕೂರು, ಮಾರ್ಚ್ 15: ಜೆಡಿಎಸ್-ಕಾಂಗ್ರೆಸ್ ಕ್ಷೇತ್ರ ಹಂಚಿಕೆ ಸಮಯದಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರಿಗೆ ಅಸಮಾಧಾನ ತಂದಿದ್ದು, ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುವ ಸಾಧ್ಯತೆ ಇದೆ.
ಹೈಕಮಾಂಡ್ ಕೇವಲ ಸೀಟು ಹಂಚಿಕೆಯನ್ನು ಮಾತ್ರವೇ ಮಾಡಿ, ಕ್ಷೇತ್ರ ಹಂಚಿಕೆಯನ್ನು ರಾಜ್ಯ ನಾಯಕರಿಗೆ ಬಿಟ್ಟಿತ್ತು. ಅದರಂತೆ ಚರ್ಚೆ ನಡೆಸಿದ ಮುಖಂಡರ ಗುಂಪು ಮೈಸೂರನ್ನು ಉಳಿಸಿಕೊಂಡು, ಹಾಲಿ ಕಾಂಗ್ರೆಸ್ ಸಂಸದರಿರುವ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.
ಮೈಸೂರು ಉಳಿಸಿಕೊಂಡು, ತುಮಕೂರನ್ನು ಬಿಟ್ಟುಕೊಡಲು ಸಿದ್ದರಾಮಯ್ಯ ಅವರೇ ಕಾರಣ ಎನ್ನಲಾಗಿದ್ದು, ಹಾಲಿ ಸಂಸದರಿರುವ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಸಿದ್ದರಾಮಯ್ಯ ಅವರ ಧೋರಣೆ ಕಾಂಗ್ರೆಸ್ ಹಿರಿಯ ಮುಖಂಡರಿಗೆ ಇಷ್ಟವಾಗಿಲ್ಲ, ಈ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಹೈಕಮಾಂಡ್‌ಗೆ ಮನವಿ ಮಾಡುವ ಸಂಭವ ಇದೆ.
ತುಮಕೂರು ಉಸ್ತುವಾರಿಗಳಾಗಿರುವ, ಡಿಸಿಎಂ ಪರಮೇಶ್ವರ್ ಅವರು ತುಮಕೂರು ಕ್ಷೇತ್ರ ಬಿಟ್ಟುಕೊಟ್ಟಿರುವುದಕ್ಕೆ ಬಹಳವಾಗಿ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.

ತುಮಕೂರು ಕೈ ಕಾರ್ಯಕರಿಂದ ಪ್ರತಿಭಟನೆ
ತುಮಕೂರಿನಲ್ಲಿ ಸಹ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಜೆಡಿಎಸ್‌ಗೆ ಬೆಂಬಲಿಸುವುದಿಲ್ಲ ಎಂದಿದ್ದಾರೆ. ಅಲ್ಲದೆ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಸಹ ಕೂಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಹ ತುಮಕೂರು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುದ್ದಹನುಮೇಗೌಡರಿಗೆ ಬೆಂಬಲಿಗರ ಆಕ್ರೋಶ
ತುಮಕೂರಿನಲ್ಲಿ ಹಾಲಿ ಸಂಸದರಾಗಿರುವ ಮುದ್ದಹನುಮೇಗೌಡ ಅವರು ಉತ್ತಮ ರಾಜಕಾರಣಿಯಾಗಿ ಹೆಸರು ಮಾಡಿದವರು, ಅವರು ಹಿರಿಯ ಕಾಂಗ್ರೆಸ್ ಮುಖಂಡ ಸಹ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಿಸ್ಪರ್ಧಿಯನ್ನು 74,041 ಭಾರಿ ಅಂತರದಿಂದ ಸೋಲಿಸಿದ್ದರು. ಅವರಿಗೆ ಟಿಕೆಟ್ ನಿರಾಕರಿಸುವುದು ತುಮಕೂರಿನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಲೆಕ್ಕಾಚಾರವೇನು?
ತುಮಕೂರು ಕೈತಪ್ಪಲು ಸಿದ್ದರಾಮಯ್ಯ ಅವರೇ ಮುಖ್ಯ ಕಾರಣ ಎನ್ನುವುದು ಜನಜನಿತ. ಮೈಸೂರು ಜಿಲ್ಲೆಯು ಕಾಂಗ್ರೆಸ್ ಹಿಡಿತ ಕೈತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರು ಮೈಸೂರನ್ನು ಕಾಂಗ್ರೆಸ್‌ಗೆ ಉಳಿಸಿಕೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದರಿಂದ ಉಂಟಾಗಿರುವ ನಾಯಕತ್ವದ ನಷ್ಟವನ್ನು ಹೀಗಾದರೂ ಪುನರ್ ಗಳಿಸಿಕೊಳ್ಳಬೇಕೆಂಬ ಲೆಕ್ಕಾಚಾರ ಅವರಿಗಿದೆ. ಅಲ್ಲದೆ ತಮ್ಮ ಬೆಂಬಲಿಗರಿಗೆ ಸೀಟು ಕೊಡಿಸಿ ಗೆಲ್ಲಿಸಿ ಕ್ಷೇತ್ರವನ್ನು ತಮ್ಮ ಸುಪರ್ಧಿಯಲ್ಲಿ ಇಟ್ಟುಕೊಳ್ಳಬೇಕೆಂಬ ಲೆಕ್ಕಾಚಾರವೂ ತಮಗೆ ಇದೆ.

ಜೆಡಿಎಸ್‌ಗೂ ಆತಂಕ
ತುಮಕೂರು ಕ್ಷೇತ್ರ ತಮ್ಮ ಕೈವಶವಾಗಿರುವುದು ಜೆಡಿಎಸ್‌ಗೆ ಸಂತೋಶ ತಂದಿದೆಯಾದರೂ ಆ ನಂತರದ ಬೆಳವಣಿಗೆಗಳನ್ನು ಕಂಡು ಆತಂಕವೂ ಆಗಿದೆ. ತುಮಕೂರಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ ತುಮಕೂರು ಕೈಬಿಟ್ಟಿದ್ದಕ್ಕೆ ಆಕ್ರೋಶ ಉಂಟಾಗಿದ್ದು, ಜೆಡಿಎಸ್‌ಗೆ ಬೆಂಬಲ ನೀಡುವುದಿಲ್ಲ ಎಂದು ಕೆಲವರು ಬಂಡಾಯ ಎದ್ದಿದ್ದಾರೆ, ಇದು ಜೆಡಿಎಸ್‌ಗೆ ಆತಂಕ ತಂದಿದೆ.












Click it and Unblock the Notifications