ತುಮಕೂರು ಪಾಲಿಕೆಯಲ್ಲಿ ಕೈ-ತೆನೆ ಮೈತ್ರಿ; ಕಾಂಗ್ರೆಸ್‌ಗೆ ಮೇಯರ್- ಉಪಮೇಯರ್ ಜೆಡಿಎಸ್ ಪಾಲು
ತುಮಕೂರು, ಸೆಪ್ಟೆಂಬರ್ 9: ಶುಕ್ರವಾರ ನಡೆದ ತುಮಕೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಮೇಯರ್ ಮತ್ತು ಉಪಮೇಯರ್ ಪಟ್ಟ ಅಲಂಕರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾವತಿ ಸುದೀಶ್ವರ್ ಮೇಯರ್ ಹಾಗೂ ಜೆಡಿಎಸ್‌ನ ಟಿಕೆ ನರಸಿಂಹಮೂರ್ತಿ ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿತ್ತು.
ತುಮಕೂರು ಪಾಲಿಕೆಯಲ್ಲಿ ಯಾವೊಂದು ಪಕ್ಷಕ್ಕೆ ಬಹುಮತ ಇಲ್ಲದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿವೆ. ಹಿಂದಿನ ಅವಧಿಯಲ್ಲೂ ಈ ಎರಡೂ ಪಕ್ಷಗಳು ಮೈತ್ರಿ ಸಾಧಿಸಿದ್ದವು, ಆದರೆ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಕಾರಣ ಬಿಜೆಪಿ ಬಹುಮತ ಇಲ್ಲದಿದ್ದರೂ ಮೇಯರ್ ಪಟ್ಟ ಪಡೆದುಕೊಂಡಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಈ ಸಮುದಾಯದಿಂದ ಯಾವೊಬ್ಬ ಅಭ್ಯರ್ಥಿ ಗೆದ್ದಿರಲಿಲ್ಲ.

ಈ ಬಾರಿ ಮೇಯರ್ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಎಸ್‌ಸಿ ಅಭ್ಯರ್ಥಿ ಇಲ್ಲದ ಕಾರಣ ಪ್ರಭಾವತಿ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಮೇಯರ್ ಸ್ಥಾನ 2ಎ ಗೆ ಮೀಸಲಿದ್ದರಿಂದ ಜೆಡಿಎಸ್‌ನಿಂದ ನರಸಿಂಹಮೂರ್ತಿ ಮತ್ತು ಬಿಜೆಪಿಯಿಂದ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಸಿದ್ದರು.
ಗೆಲ್ಲಲು 18 ಮತಗಳ ಅವಶ್ಯಕತೆಯಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ 20 ಸದಸ್ಯರ ಬಲ ಇದ್ದದ್ದರಿಂದ ಕೇವಲ 12 ಸದಸ್ಯರ ಬಲವಿದ್ದ ಬಿಜೆಪಿ ತನ್ನ ಅಭ್ಯರ್ಥಿಯ ನಾಮಪತ್ರವನ್ನು ವಾಪಸ್ ತೆಗೆಸಿದ್ದರಿಂದ ಜೆಡಿಎಸ್‌ನ ನರಸಿಂಹ ಮೂರ್ತಿ ಉಪಮೇಯರ್ ಆಗಿ ಆಯ್ಕೆಯಾದರು.












Click it and Unblock the Notifications