ಕಾಂಗ್ರೆಸ್ ನಾಯಕರಿಗೆ ಸುತ್ತಿಕೊಂಡ ಲೈಂಗಿಕ ಕಿರುಕಳ ಪ್ರಕರಣ: ಸಿಬಿಐ ಎಂಟ್ರಿ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರಗಳು ತನಿಖಾ ಸಂಸ್ಥೆಗಳನ್ನು (ಆದಾಯ ತೆರಿಗೆ, ಸಿಬಿಐ, ಜಾರಿ ನಿರ್ದೇಶನಾಲಯ) ಬಳಸಿಕೊಳ್ಳುವುದು ಸಾಮಾನ್ಯ. ಈ ಹಿಂದೆ, ಕಾಂಗ್ರೆಸ್ ಹಾಕಿಹೊಟ್ಟ ಸಂಪ್ರದಾಯವನ್ನು ಈಗ ಆಡಳಿತದಲ್ಲಿರುವ ಸರಕಾರ ಮುಂದುವರಿಸುತ್ತಿದೆ.
ಕೇರಳದ ಪ್ರಮುಖ ಕಾಂಗ್ರೆಸ್ ಮುಖಂಡರನ್ನು ಸುತ್ತಿಕೊಂಡಿದ್ದ ಸೋಲಾರ್ ಲೈಂಗಿಕ ಶೋಷಣೆ (ಸರಿಯಾ ನಾಯರ್) ಪ್ರಕರಣ ಈಗ ಮತ್ತೆ ಮುನ್ನಲೆಗೆ ಬಂದಿದೆ. ಪಿಣರಾಯಿ ವಿಜಯನ್ ಸರಕಾರದ ಶಿಫಾರಸಿನಂತೆ, ಕೇಂದ್ರ ತನಿಖಾ ದಳ (ಸಿಬಿಐ) ಈ ಕೇಸಿನ ತನಿಖೆಯನ್ನು ಆರಂಭಿಸಲಿದೆ.
ಇದೊಂದು, ಕೇರಳದ ಎರಡು ಪ್ರಮುಖ ಮೈತ್ರಿಕೂಟಗಳಾದ ಎಲ್ಡಿಎಫ್ ಮತ್ತು ಯುಡಿಎಫ್ ನಡುವಿನ ರಾಜಕೀಯ ಮೇಲಾಟದ ಪ್ರಕರಣ ಎಂದರೆ ತಪ್ಪಾಗಲಾರದು. ಕಾಂಗ್ರೆಸ್ ಪಕ್ಷವನ್ನು ಮತ್ತು ಆ ಪಕ್ಷದ ಮುಖಂಡರನ್ನು ಹಣೆಯಲು ಸಿಗುವ ಅವಕಾಶವನ್ನು ಬಿಜೆಪಿ ಕೈಚೆಲ್ಲಲು ಸಾಧ್ಯವೇ?
ಹಾಗಾಗಿ, ಸಿಪಿಐ(ಎಂ) ನೇತೃತ್ವದ ಪಿಣರಾಯಿ ವಿಜಯನ್ ಸರಕಾರ, ಸಿಬಿಐ ತನಿಖೆ ನಡೆಸುವಂತೆ ಶಿಫಾರಸು ಮಾಡಿದ್ದರಿಂದ ಸಿಬಿಐ ಈ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದೆ. ಇದೊಂದು, ಸುಮಾರು ಒಂಬತ್ತು ವರ್ಷದ ಹಿಂದಿನ ಘಟನೆಯಾಗಿದ್ದು, ಈಗ ಅದಕ್ಕೆ ಮರುಜೀವ ಬಂದಿದೆ. ಏನಿದು ಪ್ರಕರಣ?

ಬಿಜು ರಾಧಾಕೃಷ್ಣನ್ ಮತ್ತು ಸರಿತಾ ನಾಯರ್ ಸಾವಿರಾರು ಹೂಡಿಕೆದಾರರಿಂದ ಹಣ ಸಂಗ್ರಹ
ಟೀಮ್ ಸೋಲಾರ್ ಎಂಬ ಹೆಸರಿನ ನಕಲಿ ಕಂಪನಿ ಇಬ್ಬರು ಮಹಿಳೆಯರನ್ನು ಬಳಸಿಕೊಂಡು ಕೇರಳ ರಾಜ್ಯದಲ್ಲಿ ಸೌರ ವಿದ್ಯುತ್ ಘಟಕಗಳ ಸ್ಥಾಪನೆಗೆ ಮುಂದಾಗಿತ್ತು. ಈ ಮಹಿಳೆಯರು ಅಂದಿನ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ಸಿನ ಉಮ್ಮನ್ ಚಾಂಡಿ ಅವರ ಆಪ್ತ ಸಿಬ್ಬಂದಿ ಜತೆ ಸಂಪರ್ಕ ಸಾಧಿಸಿ, 70 ಮಿಲಿಯನ್ ಮೊತ್ತದ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದ್ದರು. ಈ ನಕಲಿ ಕಂಪನಿಯ ನಿರ್ದೇಶಕರಾಗಿದ್ದ ಬಿಜು ರಾಧಾಕೃಷ್ಣನ್ ಮತ್ತು ಸರಿತಾ ನಾಯರ್ ಸಾವಿರಾರು ಹೂಡಿಕೆದಾರರಿಂದ ಹಣ ಸಂಗ್ರಹಿಸಿ, ಪಾಲುದಾರಿಕೆ ಆಮಿಷ ಒಡ್ಡಿದ್ದರು. ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಚಾಂಡಿ ಅವರ ಆಪ್ತ ಟೆನ್ನಿ ಎಂಬಾತನನ್ನು ಬಂಧಿಸಲಾಗಿತ್ತು.

ಕಾಂಗ್ರೆಸ್ ಪಕ್ಷದ ನಾಯಕರಾದ ಮಾಜಿ ಸಿಎಂ ಉಮ್ಮನ್ ಚಾಂಡಿ, ಕೆ.ಸಿ.ವೇಣುಗೋಪಾಲ್
ಕೇರಳದ ವಿಪಕ್ಷ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾದ ಮಾಜಿ ಸಿಎಂ ಉಮ್ಮನ್ ಚಾಂಡಿ, ಕೆ.ಸಿ.ವೇಣುಗೋಪಾಲ್, ಎಪಿ ಅನಿಲ್ ಕುಮಾರ್, ಅಡೂರ್ ಪ್ರಕಾಶ್, ಹಿಬಿ ಈಡನ್ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಾ ಕುಟ್ಟಿ ಸೇರಿದಂತೆ ಹಲವು ನಾಯಕರ ಹೆಸರು ಹಗರಣದಲ್ಲಿ ಕೇಳಿಬಂದಿತ್ತು. ಜೊತೆಗೆ, ಹಗರಣದ ಪ್ರಮುಖ ಅಪರಾಧಿ ಸರಿತಾ ನಾಯರ್ ರನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗಿತ್ತು ಎನ್ನುವ ಆರೋಪ ಪ್ರಮುಖವಾಗಿದೆ. . ಕೋಳಿಕ್ಕೋಡ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ 3ನೇ ನ್ಯಾಯಾಲಯವು ಸರಿತಾ ನಾಯರಿಗೆ 6 ವರ್ಷಗಳ ಶಿಕ್ಷೆ ಪ್ರಕಟಿಸಿತ್ತು.

ಈ ವರ್ಷದ ಆರಂಭದಲ್ಲಿ ಈ ಕೇಸನ್ನು ಸಿಬಿಐಗೆ ವಹಿಸಿ ಶಿಫಾರಸು ಮಾಡಿತ್ತು
ಕೇರಳದ ಕ್ರೈಂ ಬ್ರಾಂಚ್ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಪಿಣರಾಯಿ ವಿಜಯನ್ ಸರಕಾರ, ಈ ವರ್ಷದ ಆರಂಭದಲ್ಲಿ ಈ ಕೇಸನ್ನು ಸಿಬಿಐಗೆ ವಹಿಸಿ ಶಿಫಾರಸು ಮಾಡಿತ್ತು. ಈಗ, ಸಿಬಿಐ ಕೇಸಿನ ವಿಚಾರಣೆ ನಡೆಸಲು ಮುಂದಾಗಿದೆ. ಕ್ರೈಂ ಬ್ರಾಂಚ್ ಇದುವರೆಗೆ ಹಾಕಿರುವ ಆರು ಎಫ್ ಐಆರ್ ಗಳನ್ನು ಸಿಬಿಐಗೆ ಹಸ್ತಾಂತರಿಸಿದೆ.

ಪಿಣರಾಯಿ ಸರಕಾರ ನಮ್ಮನ್ನು ಸಿಕ್ಕಿಹಾಕಿಸಲು ಪ್ರಯತ್ನ ನಡೆಸುತ್ತಲೇ ಇದೆ
ಇದರಿಂದಾಗಿ, ಈ ಕೇಸಿನ ವಿಚಾರಣೆ ವೇಗ ಪಡೆದುಕೊಳ್ಳುವ ಸಾಧ್ಯತೆಯಿದೆ. "ಇದರಲ್ಲಿ ಯಾವುದೇ ಹಗರಣ ನಡೆದಿಲ್ಲ, ಕಳೆದ ಐದು ವರ್ಷಗಳಿಂದ ಪಿಣರಾಯಿ ಸರಕಾರ ನಮ್ಮನ್ನು ಸಿಕ್ಕಿಹಾಕಿಸಲು ಪ್ರಯತ್ನ ನಡೆಸುತ್ತಲೇ ಇದೆ. ಇದೊಂದು ಗಿಮಿಕ್"ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಒಟ್ಟಿನಲ್ಲಿ, ಈ ಕೇಸ್ ಕಾಂಗ್ರೆಸ್ಸಿಗೆ ಮುಜುಗರ ತರುವ ಸಾಧ್ಯತೆ ಹೆಚ್ಚು.












Click it and Unblock the Notifications