ಬಂಧನಕ್ಕೊಳಗಾದ ರೆಹನಾ ಫಾತಿಮಾ ಉದ್ಯೋಗದಿಂದ ಅಮಾನತು
ತಿರುವನಂತಪುರಂ, ನವೆಂಬರ್ 27: ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ತೆರಳಲು ಯತ್ನಿಸಿ ವಿಫಲರಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಅವರಿಗೆ ಮಂಗಳವಾರ(ನವೆಂಬರ್ 27) ಕರಾಳ ದಿನವಾಗಿ ಪರಿಣಮಿಸಿದೆ. ಪೊಲೀಸರಿಂದ ಬಂಧನ, ವಿಚಾರಣೆ ಜೊತೆಗೆ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಅಯ್ಯಪ್ಪ ದೇಗುಲ ಭಕ್ತರ ಬಗ್ಗೆ ಕೆಟ್ಟದಾಗಿ ಬರೆದಿರುವ ಆರೋಪ ಹೊತ್ತುಕೊಂಡಿದ್ದ ರೆಹನಾ ಫಾತಿಮಾರನ್ನು ಪಥನಂತಿಟ್ಟ ಪೊಲೀಸರು ಬಂಧಿಸಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕೊಚ್ಚಿಯಲ್ಲಿ ಬಂಧಿಸಲಾಗಿದ್ದು, ಪಥನಂಥಿಟ್ಟ ನಗರ ಠಾಣೆ ಪೊಲೀಸರು, ಆರೋಪಿಯನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.

ಅಕ್ಟೋಬರ್ 22ರಂದು ಪಥನಂಥಿಟ್ಟ ಪೊಲೀಸರು, ರೆಹನಾ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ರೆಹನಾ ಅವರು ಫೇಸ್ ಬುಕ್ ನಲ್ಲಿ ಬಳಸಿದ ಭಾಷೆ, ಚಿತ್ರಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ. ಅಯ್ಯಪ್ಪ ಮಾಲೆಧಾರಿಯಂತೆ ವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆ ಹಾಕಿಕೊಂಡು ತತ್ವಮಸಿ ಎಂದು ಅಡಿಬರಹ ಬರೆದುಕೊಂಡಿದ್ದರು.
ರೆಹನಾ ಅವರು ಪೋಸ್ಟ್ ಗಳ ವಿರುದ್ಧ ಶಬರಿಮಲೆ ಸಂರಕ್ಷಣಾ ಸಮಿತಿ ದೂರು ನೀಡಿತ್ತು. ಐಪಿಎಸ್ ಸೆಕ್ಷನ್ 295 ಎ ಅನ್ವಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ಹಾಕಿದ್ದ ರೆಹನಾ ಅವರಿಗೆ ಹಿನ್ನಡೆಯುಂಟಾಗಿದ್ದು, ನವೆಂಬರ್ 16ರಂದು ಅವರ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತ್ತು.
ಮಂಗಳವಾರದಂದು ಬಿಎಸ್ಎನ್ಎಲ್ ನಲ್ಲಿ ಟೆಕ್ನಿಷಿಯನ್ ಆಗಿರುವ ರೆಹನಾ ಅವರು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವಾಗಲೇ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಹೀಗಾಗಿ, ರೆಹನಾ ವಿರುದ್ಧ ಕ್ರಮ ಕೈಗೊಂಡಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲಾ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಲು ಅರ್ಹರಾಗಿದ್ದಾರೆ. ಹೀಗಾಗಿ, ಅಯ್ಯಪ್ಪ ದೇಗುಲ ಪ್ರವೇಶಿಸಲು ವಿಫಲ ಯತ್ನ ನಡೆಸಿದರು. ಪೊಲೀಸ್ ಪಡೆ ಭದ್ರತೆಯೊಂದಿಗೆ ಬಂದರೂ ದೇಗುಲಕ್ಕೂ 500 ಮೀಟರ್ ದೂರದಲ್ಲಿ ಅವರನ್ನು ತಡೆದು ವಾಪಸ್ ಕಳಿಸಲಾಗಿತ್ತು.












Click it and Unblock the Notifications