ಶಬರಿಮಲೆಗೆ ಭಕ್ತರ ಆಗಮನ; ಉಚಿತ ಆಹಾರ ವ್ಯವಸ್ಥೆ
ಶಬರಿಮಲೆ, ನವೆಂಬರ್ 24 : ಕೋವಿಡ್ ಭೀತಿಯ ನಡುವೆಯೇ ಕೇರಳದ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದೆ. ಭಕ್ತರು ಆಗಮಿಸುತ್ತಿದ್ದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಶಬರಿಮಲೆಯಲ್ಲಿ ಭಕ್ತರ ಭೇಟಿಗೆ ಅವಕಾಶ ನೀಡಿ ಒಂದು ವಾರ ಕಳೆದಿದೆ. ಶನಿವಾರ 2000 ಸಾವಿರ ಭಕ್ತರು ಅಯ್ಯಪ್ಪಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ. ಈ ವರ್ಷದಲ್ಲಿ ಇಷ್ಟು ಭಕ್ತರು ಒಂದು ದಿನ ಭೇಟಿ ನೀಡಿದ್ದು ಇದೇ ಮೊದಲು.
ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ. ದೇವಾಲಯದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಲು 351 ಬಾಕ್ಸ್‌ಗಳನ್ನು ಹಾಕಲಾಗಿದೆ. ಭಕ್ತರು ಕೈ ಮತ್ತು ಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸನ್ನಿಧಾನ, ಪಂಪಾ ಮತ್ತು ನಿಲಕಲ್‌ನಲ್ಲಿ ಭಕ್ತರಿಗಾಗಿ ಉಚಿತ ಆಹಾರದ ವ್ಯವಸ್ಥೆ ಮಾಡಿದೆ. ಸನ್ನಿಧಾನದಲ್ಲಿ ಬೆಳಗ್ಗೆ 5.30ರಿಂದ ರಾತ್ರಿ 9ರ ತನಕ ಆಹಾರ ವಿತರಣೆ ಮಾಡಲಾಗುತ್ತದೆ.
ಸನ್ನಿಧಾನದ ಬಳಿ ಇರುವ ಅನ್ನದಾನ ಮಂಟಪದಲ್ಲಿ 40 ಸಿಬ್ಬಂದಿಗಳು ಆಹಾರ ತಯಾರಿಕೆಯಲ್ಲಿ ತೊಡಗಿದ್ದಾರೆ. ಇವರಲ್ಲಿ ಟಿಡಿಬಿಯ ಸಿಬ್ಬಂದಿ, ಗುತ್ತಿಗೆ ನೌಕರರರು ಸೇರಿದ್ದಾರೆ. ಆಹಾರ ವಿತರಣೆ ಸಮಯದಲ್ಲಿಯೂ ಸಾಮಾಜಿಕ ಅಂತರ ಕಾಪಾಡಬೇಕಿದೆ.
ಪಂಪಾದಲ್ಲಿ ಬೆಳಗ್ಗೆ ಸಂಜೆ 7 ರಿಂದ 10ರ ತನಕ ಆಹಾರ ವಿತರಣೆ ನಡೆಯಲಿದೆ. 20 ಸಿಬ್ಬಂದಿಗಳು ಆಹಾರ ತಯಾರು ಮಾಡುತ್ತಿದ್ದಾರೆ. ನಿಲಕಲ್‌ನಲ್ಲಿ 15 ಸಿಬ್ಬಂದಿಗಳು ಆಹಾರವನ್ನು ತಯಾರಿಸಿ ಭಕ್ತರಿಗೆ ವಿತರಣೆ ಮಾಡುತ್ತಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ 6 ವಿವಿಧ ಸ್ಥಳಗಳಲ್ಲಿ 6 ಭಾಷೆಗಳಲ್ಲಿ ಭಕ್ತರಿಗೆ ಸೂಚನೆ ನೀಡಲು ಫಲಕಗಳನ್ನು ಆಳವಡಿಸಿದೆ. ಕೋವಿಡ್ ಮಾರ್ಗಸೂಚಿಗಳನ್ನು ಹೇಗೆ ಪಾಲನೆ ಮಾಡಬೇಕು? ಎಂದು ಮಾಹಿತಿ ನೀಡಲಾಗಿದೆ












Click it and Unblock the Notifications