ಕೇರಳ ಸಿಎಂ ಭೇಟಿಯಾದ ಕೆ.ಚಂದ್ರಶೇಖರ ರಾವ್!
ತಿರುವನಂತಪುರಂ, ಮೇ 06 : ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ತೃತೀಯ ರಂಗ ರಚನೆಯ ಕಾರ್ಯಕ್ಕೆ ಕೈ ಹಾಕಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಸರ್ಕಾರ ರಚನೆಯ ಕಸರತ್ತನ್ನು ಆರಂಭಿಸಿದ್ದಾರೆ.
ಸೋಮವಾರ ಸಂಜೆ ಚಂದ್ರಶೇಖರ ರಾವ್ ತಿರುವನಂತಪುರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ಮಾಡಿ ಮಾತುಕತೆ ನಡೆಸಿದರು. ದೇಶದ ರಾಜಕಾರಣದಲ್ಲಿ ಈ ಭೇಟಿ ಬಾರಿ ಮಹತ್ವ ಪಡೆದುಕೊಂಡಿದೆ.
ಚಂದ್ರಶೇಖರ ರಾವ್ ಅವರು ಮೇ 13ರಂದು ಡಿಎಂಕೆ ಅಧ್ಯಕ್ಷ ಕೆ.ಸ್ಟಾಲಿನ್ ಭೇಟಿಯಾಗಲಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಪ್ರಕಟವಾಗಲಿದ್ದು, ಅದಕ್ಕೂ ಮೊದಲು ಚಂದ್ರಶೇಖರರಾವ್ ವಿವಿಧ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಲೋಕಸಭಾ ಚುನಾವಣೆಯಲ್ಲಿ 120 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ವಿಶ್ವಾಸವಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಚಂದ್ರಶೇಖರ ರಾವ್ ಅವರು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಸುದ್ದಿಗಳಿವೆ. ಆದರೆ, ಕಾಂಗ್ರೆಸ್-ಬಿಜೆಪಿಯೇತರ ಸರ್ಕಾರ ರಚನೆಯ ಪ್ರಯತ್ನದಲ್ಲಿರುವ ಅವರು, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರನ್ನು ತೃತೀಯ ರಂಗಕ್ಕೆ ಸೇರಿಸಿಕೊಳ್ಳಲಿದ್ದಾರೆಯೇ? ಎಂಬುದು ಪ್ರಶ್ನೆಯಾಗಿದೆ.












Click it and Unblock the Notifications