ಕೇರಳದಲ್ಲಿ ಕೊರೊನಾ ಏರಿಕೆ; ಪರೀಕ್ಷಾ ಕಾರ್ಯತಂತ್ರ ಬದಲಾವಣೆ
ತಿರುವನಂತಪುರಂ, ಆಗಸ್ಟ್ 30: ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಾಗಿ ಕೊರೊನಾ ಪರೀಕ್ಷಾ ಕಾರ್ಯತಂತ್ರವನ್ನು ರಾಜ್ಯ ಸರ್ಕಾರ ಬದಲಾಯಿಸಲಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾಜಾರ್ಜ್ ತಿಳಿಸಿದ್ದಾರೆ.
ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಕೇರಳದಲ್ಲಿ ದಾಖಲಾಗಿವೆ. ದೇಶದ ಮುಕ್ಕಾಲು ಪ್ರಕರಣಗಳು ಕೇರಳವೊಂದರಿಂದಲೇ ಪತ್ತೆಯಾಗಿವೆ. ಅಗತ್ಯ ಕ್ರಮಗಳ ಹೊರತಾಗಿಯೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರದೇ ಇರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಜಿಲ್ಲೆಗಳಲ್ಲಿ ಲಸಿಕಾ ಸ್ಥಿತಿಯನ್ನು ಆಧರಿಸಿ ಮಾರ್ಗಸೂಚಿಗಳನ್ನು ನೀಡಲಾಗಿದೆ. ಹೆಚ್ಚು ಜನರಿಗೆ ಕೊರೊನಾ ಪರೀಕ್ಷೆಗಳನ್ನು ನಡೆಸಲು ಸೂಚಿಸಲಾಗಿದೆ. ಸಮುದಾಯದಲ್ಲಿ ಕೊರೊನಾ ಹರಡುವಿಕೆಯ ನಿಖರ ಪ್ರಮಾಣ ಪತ್ತೆ ಹಚ್ಚಲು ಕರೊನಾ ಪರೀಕ್ಷೆಯನ್ನು ಚುರುಕುಗೊಳಿಸಲಾಗಿದೆ. ಸೆಂಟಿನಲ್ ಹಾಗೂ ರಾಂಡಮ್ ಪರೀಕ್ಷೆ ಆಧಾರದಲ್ಲಿ ಕೊರೊನಾ ಹರಡುವಿಕೆಯನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದರು.
ಲಸಿಕೆಯ ಮೊದಲ ಡೋಸ್ ಅನ್ನು ಶೇ 80ಕ್ಕಿಂತ ಹೆಚ್ಚು ನೀಡಿರುವ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳು, ಅಂದರೆ ಗಂಟಲು ನೋವು, ಕೆಮ್ಮಿನಂಥ ಲಕ್ಷಣಗಳು ಕಂಡುಬಂದ ವ್ಯಕ್ತಿಗಳಿಗೆ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಶಿಫಾರಸು ಮಾಡಲಾಗಿದೆ ಎಂದರು.
ಸೆಂಟಿನಲ್ ಪರೀಕ್ಷಾ ವಿಧಾನದ ಭಾಗವಾಗಿ ಆಂಟಿಜೆನ್ ಟೆಸ್ಟಿಂಗ್ ನಡೆಸಲಾಗುತ್ತದೆ. ಅಂಗಡಿ ಮಳಿಗೆಗಳು, ಮಾಲ್‌ಗಳು, ಕಚೇರಿಗಳು, ಸಂಸ್ಥೆಗಳು ಹಾಗೂ ಸಾರಿಗೆ ತಾಣಗಳಂಥ, ಹೆಚ್ಚಿನ ಸಾಮಾಜಿಕ ಸಂಪರ್ಕ ಹೊಂದಿರುವ ಕಡೆಗಳಲ್ಲಿ ಜನರಿಗೆ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಗಳಲ್ಲಿ ರೋಗದ ಸ್ಥಿತಿ ನಿರ್ಣಯಿಸಲು ಆಂಟಿಜೆನ್ ಪರೀಕ್ಷೆಗೆ ಒತ್ತು ನೀಡಲಾಗುತ್ತದೆ. ಮೊದಲ ಡೋಸ್ ಲಸಿಕೆಯನ್ನು 80%ಕ್ಕಿಂತ ಕಡಿಮೆ ಇರುವ ಸ್ಥಳೀಯ ಆಡಳಿತ ಪ್ರದೇಶಗಳಲ್ಲಿ ಹಳೆಯ ವ್ಯವಸ್ಥೆ ಮುಂದುವರೆಯುತ್ತದೆ ಎಂದು ವೀಣಾ ಜಾರ್ಜ್ ಹೇಳಿದರು.
ಸಂಗ್ರಹಿಸಿದ ಮಾದರಿಗಳನ್ನು ಶೀಘ್ರವೇ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಫಲಿತಾಂಶವನ್ನು ಕೂಡ ಶೀಘ್ರ ಅಪ್‌ಲೋಡ್ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ.
ಕೇರಳದಲ್ಲಿ ಭಾನುವಾರ 29,836 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 40,07,408 ಆಗಿದೆ.

ಕೇರಳದಲ್ಲಿ ಮತ್ತೆ ನೈಟ್ ಕರ್ಫ್ಯೂ: ರಾಜ್ಯದಲ್ಲಿ ಕೊರೊನಾ ಏರಿಕೆ ಹಿನ್ನೆಲೆಯಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಕೇಂದ್ರ ಸರ್ಕಾರ ಹೆಚ್ಚು ಪಾಸಿಟಿವಿಟಿ ದರ ಇರುವ ಕಡೆಗಳಲ್ಲಿ ನೈಟ್ ಕರ್ಫ್ಯೂ ವಿಧಿಸಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿತ್ತು.
ಕೇರಳದಲ್ಲಿ ಕೊರೊನಾ ಏರಿಕೆ ಕುರಿತು ಈಚೆಗೆ ಮಾಹಿತಿ ನೀಡಿದ್ದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, 'ರಾಜ್ಯದಲ್ಲಿ ಮನೆಯೊಳಗೇ ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚಾಗುತ್ತಿದೆ' ಎಂದಿದ್ದಾರೆ.
ಹೋಂ ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರ ಸೂಚನೆ: ಸದ್ಯಕ್ಕೆ ರಾಜ್ಯದ ಕೊರೊನಾ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ, ಕೊರೊನಾ ಸೋಂಕಿನ ಹರಡುವಿಕೆ ಮನೆಯೊಳಗೇ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಇಂಥ ಪ್ರಕರಣಗಳು ರಾಜ್ಯದಲ್ಲಿ ಅಧಿಕವಿದೆ ಎಂದಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಈ ಸಂಬಂಧ ಅಧ್ಯಯನ ನಡೆಸಿದ್ದು, ಈ ಮಾಹಿತಿ ಪ್ರಕಾರ 35% ಕೊರೊನಾ ಪ್ರಕರಣಗಳು ಮನೆಯ ಪರಿಧಿಯೊಳಗೇ ಹರಡಿದ್ದಾಗಿದೆ' ಎಂದು ತಿಳಿಸಿದ್ದರು.
ಪ್ರತಿ ಜಿಲ್ಲೆಯಲ್ಲಿಯೂ ಪರಿಸ್ಥಿತಿಗೆ ತಕ್ಕಂತೆ ಲಸಿಕೆ ವಿತರಣೆ ನಡೆಯಬೇಕು. 'ಟೆಸ್ಟ್ರ್, ಟ್ರ್ಯಾಕ್, ಟ್ರೀಟ್, ವ್ಯಾಕ್ಸಿನೇಟ್ ಹಾಗೂ ಕೊರೊನಾ ನಿಯಮಗಳಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ರಾಜ್ಯದಲ್ಲಿ ಸೋಂಕು ಇನ್ನಷ್ಟು ವೇಗದಲ್ಲಿ ಹರಡುತ್ತದೆ ಎಂದು ಎಚ್ಚರಿಕೆ ರವಾನಿಸಿದೆ.











Click it and Unblock the Notifications