ಹೆಂಡತಿ, ಮಗುವನ್ನುನೋಡಲು ಬಸ್ಸನ್ನೇ ಕದ್ದ ವ್ಯಕ್ತಿ, ಮುಂದೇನಾಯ್ತು?
ತಿರುವನಂತಪುರಂ, ಮೇ 12: ಹೆಂಡತಿ, ಮಗುವನ್ನು ನೋಡಲು ವ್ಯಕ್ತಿಯೊಬ್ಬ ಬಸ್ಸನ್ನೇ ಕಳವು ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಂತೆ ಕೇರಳದಲ್ಲೂ ಲಾಕ್‌ಡೌನ್ ಜಾರಿಯಲ್ಲಿದೆ. ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಹೆಂಡತಿ, ಮಗುವನ್ನುನೋಡಲು ಬಸ್ಸನ್ನೇ ಕದ್ದಿದ್ದ.
30 ವರ್ಷದ ದಿನೂಪ್ ಕಳ್ಳತನ ಮಾಡಿದ ವ್ಯಕ್ತಿ, ಆತನ ಹೆಂಡತಿ ಮತ್ತು ಮಗು ಪಥನಮತ್ತಟ್ಟಾ ಜಿಲ್ಲೆಯ ತಿರುವಲ್ಲಾದಲ್ಲಿ ವಾಸವಿದ್ದಾರೆ. ಆದರೆ ಆತನು ಕೆಲಸ ಮಾಡುತ್ತಿದ್ದುದು 270 ಕಿ.ಮೀ ದೂರದ ಕೋಳಿಕ್ಕೋಡ್‌ನಲ್ಲಿ, ಲಾಕ್‌ಡೌನ್‌ನಲ್ಲಿ ಲಾಕ್ ಆಗಿದ್ದ ದಿನೂಪ್ ತಿರುವಲ್ಲಾಗೆ ತೆರಳಲು ಉಪಾಯವೊಂದನ್ನು ಮಾಡಿದ್ದಾನೆ.

ಅಲ್ಲೇ ನಿಲ್ಲಿಸಿದ್ದ ಬಸ್ ಒಂದನ್ನು ಗಮನಿಸಿದ ಆತ, ಸುತ್ತ ಯಾರೂ ಇಲ್ಲದನ್ನು ಗಮನಿಸಿ ಹೇಗೋ ಗಾಡಿ ಸ್ಟಾರ್ಟ್ ಮಾಡಿದ್ದಾನೆ. ಗಾಡಿಯಲ್ಲಿ ಪೂರ್ತಿ ಡೀಸೆಲ್ ಇದ್ದಿದ್ದರಿಂದ ಊರಿಗೆ ತೆಗೆದುಕೊಂಡು ಹೋಗಬಹುದು ಎಂಬ ನಂಬಿಕೆ ಇತ್ತು.
ಶನಿವಾರ ರಾತ್ರಿ ಕೋಳಿಕ್ಕೋಡ್‌ನಿಂದ ಹೊರಟು, ಮಲಪ್ಪುರಂ, ತ್ರಿಶೂರ್, ಎರ್ನಾಕುಲಂ ಮೂಲಕ ಕೊಟ್ಟಾಯಂ ಜಿಲ್ಲೆ ಪ್ರವೇಶಿಸಿದ್ದಾನೆ. ಆದರೆ ಅಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾದ ಕುಮಾರಕೋಮ್‌ನಲ್ಲಿ ಪೊಲೀಸರು ಆತನನ್ನು ತಡೆದಿದ್ದಾರೆ.
ಈ ಹಿಂದೆ ನಾಲ್ಕು ಜಿಲ್ಲೆಗಳಲ್ಲಿ ಕಾರ್ಮಿಕರನ್ನು ಬೇರೆಡೆಗೆ ಸಾಗಿಸಲು ಹೋಗುತ್ತಿರುವುದಾಗಿ ಹೇಳಿದ್ದಾನೆ. ಆದರೆ ಚಾಲನಾ ಪರವಾನಗಿ ಇಲ್ಲದ ಕಾರಣ ಪೊಲೀಸರಿಗೆ ಅನುಮಾನ ಬಂದು, ಆರ್‌ಟಿಒ ಅಪ್ಲಿಕೇಷನ್‌ನಲ್ಲಿ ಗಾಡಿಯ ನಂಬರ್ ತೆಗೆದು ಚೆಕ್ ಮಾಡಿದ್ದಾರೆ. ಅದರಲ್ಲಿದ್ದ ಗಾಡಿ ಮಾಲೀಕನ ನಂಬರ್‌ಗೆ ಕರೆ ಮಾಡಿದಾಗ ಆತ ಸಿಕ್ಕಿಬಿದ್ದಿದ್ದಾನೆ.












Click it and Unblock the Notifications