ಕೃಷಿ ಮಾಡಲು ಕಾರ್ಪೊರೇಟ್ ಕೆಲಸ ತೊರೆದಿದ್ದ ಟೆಕ್ಕಿ ಭತ್ತದ ಗದ್ದೆಯಲ್ಲಿ ಸಿಡಿಲು ಬಡಿದು ದಾರುಣ ಸಾವು

ಮೈಸೂರು: ಕೈತುಂಬಾ ಸಂಬಳ ತರುತ್ತಿದ್ದ ಐಟಿ ಕಂಪನಿಯ ಕಾರ್ಪೊರೇಟ್ ಕೆಲಸ ಅವನದ್ದು. ಆದರೆ ಆತನಿಗೆ ಕೃಷಿ, ಮಣ್ಣು ಮತ್ತು ಪ್ರಕೃತಿಯ ಮೇಲೆ ಅಪಾರ ಪ್ರೀತಿ. ಹೀಗಾಗಿಯೇ ಪ್ರತಿಷ್ಠಿತ ಕೆಲಸಕ್ಕೆ ರಾಜೀನಾಮೆ ನೀಡಿ, ಕೃಷಿ ಕ್ಷೇತ್ರದತ್ತ ಮುಖ ಮಾಡಿದ್ದ ಅವನ ಜೊತೆ ವಿಧಿ ಬೇರೆಯದೇ ಆಟ ಆಡಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡುವ ಕನಸು ಕಂಡಿದ್ದ ಕೊಡಗು ಮೂಲದ ಟೆಕ್ಕಿಯೊಬ್ಬರು ಮೈಸೂರು ಬಳಿ ಭತ್ತದ ಗದ್ದೆಯಲ್ಲಿಯೇ ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಕೊಡಗಿನ ಮಡಿಕೇರಿ ಸಮೀಪದ ಹೆರವನಾಡು ಗ್ರಾಮದ ನಿವಾಸಿ ಹೊಸೊಕ್ಲು ರೋಷನ್ ಬಾಲಕೃಷ್ಣ ಎಂದು ಗುರುತಿಸಲಾಗಿದೆ.

ಮಂಗಳವಾರ ಮೈಸೂರು ತಾಲೂಕಿನ ಇಲವಾಲದ ಬಳಿ ಇರುವ ತಮ್ಮ ಜಮೀನಿಗೆ ರೋಷನ್ ಅವರು ಪತ್ನಿ ಹಾಗೂ ಮಗನೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ತೋಟದಲ್ಲಿ ಬೆಳೆದಿದ್ದ ಮಾವಿನಕಾಯಿ ಕೀಳಲು ಮುಂದಾಗಿದ್ದಾರೆ. ಮಳೆ ಬರುವ ಮುನ್ಸೂಚನೆ ಇತ್ತು, ಈ ವೇಳೆ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿ ಭಾರಿ ಸಿಡಿಲು ಅಪ್ಪಳಿಸಿದೆ. ದುರದೃಷ್ಟವಶಾತ್ ರೋಷನ್ ಬಾಲಕೃಷ್ಣ ಅವರ ಮೇಲೆ ಸಿಡಿಲು ಬಡಿದಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

Techie

ಕಣ್ಮುಂದೆಯೇ ನಡೆದ ಈ ಘೋರ ದುರಂತ ಕಂಡು ಪತ್ನಿ ಹಾಗೂ ಪುತ್ರ ತೀವ್ರ ಆಘಾತಕ್ಕೊಳಗಾಗಿದ್ದಾರೆ. ರೋಷನ್ ಅವರ ಜೊತೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ರೋಷನ್ ಬಾಲಕೃಷ್ಣ ಅವರು ದಿವಂಗತ ಹೊಸೊಕ್ಲು ಬಾಲಕೃಷ್ಣ ಅವರ ಪುತ್ರ. ಇವರು ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಉತ್ತಮ ಹುದ್ದೆಯಲ್ಲಿದ್ದರು. ಆದರೆ, ಕೃಷಿ ಮಾಡಬೇಕು ಎಂಬುದು ಅವರ ಬಹುದೊಡ್ಡ ಕನಸಾಗಿತ್ತು. ಇದಕ್ಕಾಗಿ ಇತ್ತೀಚೆಗಷ್ಟೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ತಮ್ಮ ಸಹೋದ್ಯೋಗಿಯೊಬ್ಬರೊಂದಿಗೆ ಸೇರಿ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ದಿಟ್ಟ ಹೆಜ್ಜೆ ಇಟ್ಟಿದ್ದರು.

ರೋಷನ್ ಅವರ ಕೃಷಿ ಮೇಲಿನ ಆಸಕ್ತಿ ಎಷ್ಟಿತ್ತೆಂದರೆ, ಅವರು ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗಿರಲಿಲ್ಲ. ಕೃಷಿಗೆ ಆಧುನಿಕ ಯಂತ್ರೋಪಕರಣಗಳನ್ನು ಪರಿಚಯಿಸುವುದು, ಕೃಷಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಮಾಡುವುದು ಸೇರಿದಂತೆ ಹಲವು ವಿನೂತನ ಯೋಜನೆಗಳನ್ನು ಅವರು ರೂಪಿಸಿದ್ದರು. ಐಟಿ ವಲಯದಲ್ಲಿ ತಾವು ಕಲಿತ ನಿರ್ವಹಣಾ ಕೌಶಲ್ಯಗಳನ್ನು ಕೃಷಿ ಮಾರುಕಟ್ಟೆಗೆ ಬಳಸಿಕೊಳ್ಳುವ ಗುರಿ ಹೊಂದಿದ್ದರು. ತಮ್ಮ ಜಮೀನಿನಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ಸಾಧನೆ ಮಾಡುವ ಹಂಬಲ ಅವರದ್ದಾಗಿತ್ತು. ಆದರೆ, ಪ್ರಕೃತಿಯ ವಿಕೋಪ ಅವರ ಎಲ್ಲಾ ಕನಸುಗಳನ್ನು ನುಚ್ಚುನೂರು ಮಾಡಿದೆ.

ಪತ್ನಿ ಮತ್ತು ಒಬ್ಬ ಮಗನನ್ನು ಅಗಲಿದ್ದ ರೋಷನ್ ಅವರ ಹಠಾತ್ ಮರಣವು ಇಡೀ ಕುಟುಂಬವನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ಮೃತರ ಅಂತ್ಯಕ್ರಿಯೆಯನ್ನು ಮಡಿಕೇರಿ ಸಮೀಪದ ಅವರ ಸ್ವಗ್ರಾಮ ಹೆರವನಾಡಿನಲ್ಲಿ ಬುಧವಾರ ನೆರವೇರಿಸಲಾಯಿತು. ಬಂಧು-ಮಿತ್ರರು, ಗ್ರಾಮಸ್ಥರು ಹಾಗೂ ಕೃಷಿ ಮತ್ತು ಐಟಿ ಕ್ಷೇತ್ರದ ಅವರ ಸ್ನೇಹಿತರು ಕಂಬನಿ ಮಿಡಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವೆಡೆ ಮಳೆ ಹಾಗೂ ಸಿಡಿಲಿನ ಅಬ್ಬರ ಹೆಚ್ಚಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಮುನ್ಸೂಚನೆ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+