ವೈರಲ್ ಆಯ್ತು ಕೇರಳ ಸಲಿಂಗಿಗಳ ಪ್ರಿ ವೆಡ್ಡಿಂಗ್ ಫೋಟೊಶೂಟ್; ಜೊತೆಗೆ ಪ್ರೀತಿಯ ಸಂದೇಶ
Recommended Video
ಕೇರಳ, ಡಿಸೆಂಬರ್ 13: ನವ ಜೋಡಿಗಳು ತಮ್ಮ ಮದುವೆಯ ಮುಂಚಿನ ಆ ಸುಮಧುರ ಕ್ಷಣಗಳನ್ನು ಸ್ಮರಣೀಯವಾಗಿಸಿಕೊಳ್ಳಲು ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಮಾಡಿಸಿಕೊಳ್ಳುವುದು ಟ್ರೆಂಡ್ ಆಗಿದೆ. ತಮ್ಮ ಪ್ರೀತಿಯ ಭಾವನೆ ವ್ಯಕ್ತಪಡಿಸುವ ಚೆಂದದ ಚಿತ್ರಗಳನ್ನು ತೆಗಿಸಿ ದಾಂಪತ್ಯದ ಹೊಸ್ತಿಲಲ್ಲಿ ನಿಂತು ತಮ್ಮ ಮುಂದಿನ ವೈವಾಹಿಕ ಜೀವನವನ್ನು ಖುಷಿಯಿಂದ ಆಮಂತ್ರಿಸುತ್ತಾರೆ.
ಹೀಗೆಯೇ ತಮ್ಮ ಪ್ರೀತಿಯನ್ನು ಸಂಭ್ರಮಿಸಲು, ಜೊತೆಜೊತೆಗೆ ಪ್ರೀತಿಯ ಕುರಿತು ಒಂದು ಸಂದೇಶವನ್ನು ನೀಡಲೆಂದೇ ಕೇರಳದಲ್ಲಿ ಸಲಿಂಗ ಪ್ರೇಮಿಗಳು ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಮಾಡಿಸಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇರಳದ ಅಬ್ದುಲ್ ರಹೀಂ ಮತ್ತು ನೆವಿದ್ ಆಂಟೋನಿ ಚುಲ್ಲಿಕಾಲ್ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿರುವ ಸಲಿಂಗಿ ಜೋಡಿ. ತಮ್ಮ ಪ್ರೀತಿಯ ಭಾವಗಳನ್ನು ವ್ಯಕ್ತಪಡಿಸುವಂಥ ಹಲವು ಫೋಟೊಗಳನ್ನು ಈ ಜೋಡಿ ತೆಗೆಸಿಕೊಂಡಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

"ನವಜೋಡಿಗಳು ಮದುವೆಗೆ ಮುನ್ನ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಮಾಡಿಸಿಕೊಳ್ಳುತ್ತಾರೆ. ಹಾಗೆಯೇ ನಾವೂ ಮಾಡಿಸಿದೆವು. ಪ್ರೀತಿ ಎಲ್ಲರಿಗೂ ಒಂದೇ. ಎಲ್ಲಕ್ಕಿಂತ ಹೆಚ್ಚಾಗಿ ಸಲಿಂಗಿಗಳ ಪ್ರೀತಿಯು ಎಲ್ಲರಂತೆ ಸಹಜ ಎಂಬ ಸಂದೇಶವನ್ನು ಸಾರುವ ಉದ್ದೇಶವೂ ಈ ಫೋಟೊಶೂಟ್ ಹಿಂದಿದೆ. ಪ್ರೀತಿಯಲ್ಲಿ ಯಾವುದನ್ನೂ ಕಳೆದುಕೊಳ್ಳಬಾರದು, ಏಕೆಂದರೆ ಅದರಲ್ಲಿ ಎಲ್ಲವೂ ಸುಂದರ" ಎಂಬ ಸಂದೇಶ ಹಾಕಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಈ ಫೋಟೊಗಳಿಗೆ ನೆಟ್ಟಿಗರು ಶುಭ ಹಾರೈಸಿದ್ದಾರೆ. ಫೋಟೊಶೂಟ್ ನೊಂದಿಗೆ ಅರಿಶಿನ ಶಾಸ್ತ್ರ, ಮೆಹೆಂದಿ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿರುವುದಾಗಿ ಈ ಜೋಡಿ ತಿಳಿಸಿದೆ. ಬೆಂಗಳೂರಿನಲ್ಲಿ ಮದುವೆಯಾಗುವ ಆಲೋಚನೆಯಿರುವುದಾಗಿಯೂ ಹೇಳಿದ್ದಾರೆ.

ಐದು ವರ್ಷದಿಂದ ಇವರು ಪ್ರೀತಿಸುತ್ತಿದ್ದಾರೆ. ಮನೆಯಿಂದ ಈ ಮದುವೆಗೆ ಬೆಂಬಲವಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಾತು ಕೇಳಿಬಂದಿದ್ದು, ಖುಷಿಯಿಂದ ಮದುವೆಯಾಗಲು ಅಣಿಯಾಗಿದ್ದಾರೆ.












Click it and Unblock the Notifications