28ವರ್ಷಗಳ ಬಳಿಕ ಡಿ. 22ರಂದು ಸಿಸ್ಟರ್ ಅಭಯಾ ಕೇಸ್ ತೀರ್ಪು
ಕೊಟ್ಟಾಯಂ, ಡಿ 22: ಸಿಸ್ಟರ್ ಅಭಯಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನ ಸಿಬಿಐ ವಿಶೇಷ ನ್ಯಾಯಾಲಯವು ಮಂಗಳವಾರದಂದು ತನ್ನ ತೀರ್ಪು ನೀಡಲಿದೆ.
1992ರ ಮಾರ್ಚ್ 27ರಂದು ಕೊಟ್ಟಾಯಂ ಪಯಸ್ ಟೆನ್ತ್ ಕಾನ್ವೆಂಟ್‌ನ ಬಾವಿಯಲ್ಲಿ 19 ವರ್ಷ ವಯಸ್ಸಿನ ಸಿಸ್ಟರ್ ಅಭಯಾ ಶವ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಪ್ರಕರಣ ಎಂದು ಸ್ಥಳೀಯ ಪೊಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು. ಆದರೆ ಅಂದಿನ ಕೊಟ್ಟಾಯಂ ನಗರಸಭೆ ಚೇರ್ಮನ್ ಪಿಸಿ ಚೆರಿಯನ್ ಮಡುಕ್ಕನಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಜೋಮೋನ್ ಪುತ್ತನ್ ಪುರಕಲ್ ಅವರು ಈ ಪ್ರಕರಣವನ್ನು ಕೋರ್ಟಿನ ಮುಂದಿಟ್ಟರು.
ನಂತರ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿತ್ತು. ಆದರೆ ಕ್ರೈಂ ಬ್ರಾಂಚ್ ಪೊಲೀಸರು ಕೂಡಾ ಅಭಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಷರಾ ಹಾಕಿದರು. 1993 ಮಾರ್ಚ್ 29ಕ್ಕೆ ತನಿಖೆಯನ್ನು ಸಿಬಿಐ ವಹಿಸಿಕೊಂಡಿತು.

ಆದರೆ, ಸೂಕ್ತ ಸಾಕ್ಷಿಗಳಿಲ್ಲದೆ ಪ್ರಕರಣ ಹಳ್ಳ ಹಿಡಿಯುವ ಹಾದಿ ತಲುಪಿತ್ತು. 1996, 1999 ಹಾಗೂ 2005ರಲ್ಲಿ ತನಿಖೆ ಮುಕ್ತಾಯಗೊಳಿಸಲು ಸಿಬಿಐ ನ್ಯಾಯಾಲಯದ ಅನುಮತಿ ಮನವಿ ಸಲ್ಲಿಸಿತ್ತು. ಆದರೆ, ನ್ಯಾಯಾಲಯದಿಂದ ಮನವಿ ಪುರಸ್ಕರಿಸರಿಸಿರಲಿಲ್ಲ.
2008ರ ನವೆಂಬರ್ 18ರಂದು ಕೊನೆಗೂ ಸಿಬಿಐ ತನಿಖೆ ಪ್ರಗತಿ ಕಂಡು ಆರೋಪಿಗಳನ್ನು ನ್ಯಾಯಾಲಯದ ಮುಂದೆ ತರುವಲ್ಲಿ ಯಶಸ್ವಿಯಾಯಿತು.
ಫಾದರ್ ಥಾಮಸ್ ಎಂ.ಕೊಟ್ಟೂರ್( ಆರೋಪಿ 1), ಫಾದರ್ ಜೋಸ್ ಪೂತೃಕ್ಕಯಿಲ್, ಸಿಸ್ಟರ್ ಸೆಫಿ ಬಂಧಿಸಲಾಯಿತು. ಆದರೆ, ಎಲ್ಲರಿಗೂ ಜಾಮೀನು ಸಿಕ್ಕಿತ್ತು. 2018ರಲ್ಲಿ ಫಾದರ್ ಜೋಸ್ ಪೂತೃಕ್ಕಯಿಲ್ ಪ್ರಕರಣದಿಂದ ಖುಲಾಸೆಗೊಂಡರು.
ಹತ್ಯೆಗೆ ಏನು ಕಾರಣ?:
1992ರ ಮಾರ್ಚ್ 27ರಂದು ಕಾನ್ವೆಂಟ್ ರೂಮೊಂದರಲ್ಲಿ ಸಿಸ್ಟರ್ ಸೆಫಿ ಹಾಗೂ ಥಾಮಸ್ ಎಂ.ಕೊಟ್ಟೂರ್ ಇಬ್ಬರು ಅಪ್ಪಿಕೊಂಡು ಮುದ್ದಾಡುತ್ತಿದ್ದನ್ನು ಸಿಸ್ಟರ್ ಅಭಯಾ ಅಕಸ್ಮಾತ್ ನೋಡಿದ್ದಾರೆ. ನಂತರ ಕೊಟ್ಟೂರ್, ಜೋಸ್ ಹಾಗೂ ಸೆಫಿ ಸೇರಿಕೊಂಡು ಅಭಯಾರನ್ನು ಕೊಚ್ಚಿ ಕೊಂದು, ಬಾವಿಗೆ ಎಸೆಯಲಾಗಿತ್ತು ಎಂದು ಸಿಬಿಐ ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿದೆ.












Click it and Unblock the Notifications