ಬ್ರಿಟನ್‌ನಿಂದ ಕೇರಳಕ್ಕೆ ಬಂದ 8 ಮಂದಿಗೆ ಕೊರೊನಾ ವೈರಸ್
ತಿರುವನಂತಪುರಂ, ಡಿಸೆಂಬರ್ 26: ಕಳೆದ ಒಂದು ವಾರದಲ್ಲಿ ಬ್ರಿಟನ್‌ನಿಂದ ಕೇರಳಕ್ಕೆ ವಾಪಸ್ಸಾಗಿದ್ದ ಎಂಟು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬ್ರಿಟನ್ ನಲ್ಲಿ ಪತ್ತೆಯಾದ ಕೊರೊನಾ ರೂಪಾಂತರ ಸೋಂಕು ಇದಾಗಿರಬಹುದೇ ಎಂಬುದರ ಪತ್ತೆಗೆ ಎಲ್ಲರ ವರದಿಯನ್ನು ಪುಣೆ ನ್ಯಾಷನಲ್ ಇನ್ ಸ್ಟಿಟ್ಯೂಟ್ ಫಾರ್ ವೈರಾಲಜಿ ಸಂಸ್ಥೆಗೆ ಕಳುಹಿಸಿರುವುದಾಗಿ ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
ಕೆಲವು ದೇಶಗಳಲ್ಲಿ ಹೊಸ ರೂಪಾಂತರದ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆ ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಲ್ಲಿಯೂ ನಿಗಾ ವಹಿಸಲಾಗಿದೆ. ರಾಜ್ಯದಲ್ಲಿ ಸೋಂಕಿನ ಪ್ರಕರಣಗಳಲ್ಲೂ ಕೆಲವು ವ್ಯತ್ಯಾಸಗಳು ಕಂಡುಬಂದಿವೆ. ಆದರೆ ಇವು ಬ್ರಿಟನ್ ರೂಪಾಂತರದ ಸೋಂಕು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಸೋಂಕಿನ ಬಗ್ಗೆ ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ರೂಪಾಂತರದ ಬಗ್ಗೆ ಏಮ್ಸ್ ಕೊಟ್ಟ ಎಚ್ಚರಿಕೆ
ಸೋಂಕಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಜಾಗರೂಕವಾಗಿರಬೇಕಿದೆ ಎಂದು ಜನರಿಗೆ ಸಲಹೆ ನೀಡಿದ್ದಾರೆ. ಕೇರಳದಲ್ಲಿ ಇದ್ದಕ್ಕಿದ್ದಂತೆ ಕೊರೊನಾ ಪ್ರಕರಣಗಳು ಏರಿಕೆಯಾಗಿವೆ ಎಂಬುದು ಸುಳ್ಳು ವರದಿ. ಸ್ಥಳೀಯ ಸಂಸ್ಥೆ ಚುನಾವಣೆಗಳ ನಂತರ ಪ್ರಕರಣಗಳಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಅದು ನಿರೀಕ್ಷಿತವೇ ಆಗಿತ್ತು. ಆದರೆ ಮರಣ ಪ್ರಮಾಣದಲ್ಲಿ ಶೇ 0.5ರಷ್ಟು ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
ಬ್ರಿಟನ್ ನಲ್ಲಿ ಪತ್ತೆಯಾದ ಹೊಸ ರೂಪಾಂತರದ ಸೋಂಕು ಅತಿವೇಗವಾಗಿ ಹರಡುತ್ತಿದೆ. ಸಾಮಾನ್ಯ ಸೋಂಕಿಗಿಂತ ಶೇ 70ರಷ್ಟು ಹೆಚ್ಚು ವೇಗವಾಗಿ ಹರಡುತ್ತಿರುವುದು ಸಾಬೀತಾಗಿದೆ ಎಂದು ಬ್ರಿಟನ್ ಆರೋಗ್ಯ ಇಲಾಖೆ ತಿಳಿಸಿತ್ತು. ಬ್ರಿಟನ್ ನ ಸೆಂಟರ್ ಫಾರ್ ಮ್ಯಾಥಮೆಟಿಕಲ್ ಮಾಡೆಲಿಂಗ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ಈ ಕುರಿತು ಅಧ್ಯಯನ ಕೈಗೊಂಡು, ಶುಚಿತ್ವ ಹಾಗೂ ಸೂಕ್ತ ಔಷಧೋಪಚಾರದಿಂದ ಈ ಸೋಂಕಿನ ವೇಗವನ್ನು ಶೇ 70ರಿಂದ ಶೇ.56ಕ್ಕೆ ಇಳಿಸಬಹುದು ಎಂದು ಹೇಳಿದೆ.