ವೇಷ ಬದಲಿಸಿಕೊಂಡು ಅಯ್ಯಪ್ಪ ದರ್ಶನ ಪಡೆದ ಕೇರಳ ಮಹಿಳೆ
Recommended Video

ತಿರುವನಂತಪುರಂ, ಜನವರಿ 10: ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ ಮೇಲೆ ವಿರೋಧದ ಹೊರತಾಗಿಯೂ ಕೆಲವು ಮಹಿಳೆಯರು ದೇವಾಲಯ ಪ್ರವೇಶಿಸಿದ ಘಟನೆ ವರದಿಯಾಗುತ್ತಿದೆ.
ಜನವರಿ 2 ರಂದು ಕನಕದುರ್ಗಾ ಮತ್ತು ಬಿಂದು ಎಂಬ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಿಸಿದ ನಂತರ ಇದೀಗ ಕೇರಳದ 36 ವರ್ಷ ವಯಸ್ಸಿನ ಮಂಜು ಎಂಬ ಮಹಿಳೆ ದೇವಾಲಯ ಪ್ರವೇಶಿಸಿದ್ದಾರೆ.
ಆದರೆ ಯಾವ ಪೊಲೀಸ್ ಬೆಂಬಲವೂ ಇಲ್ಲದೆ ಅವರು ದೇವಾಲಯ ಪ್ರವೇಶಿಸಿದ್ದು ಅಚ್ಚರಿ ಮೂಡಿಸಿದೆ. 36 ವರ್ಷ ವಯಸ್ಸಿನ ಮಂಜು ವೃದ್ಧ ಮಹಿಳೆಯಂತೇ ಕೂದಲಿಗೆ ಡೈ ಮಾಡಿಕೊಂಡು, ವೇಷ ಬದಲಿಸಿ ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಈ ಕುರಿತು ಪೊಲೀಸರಿಂದ ಯಾವುದೇ ಸ್ಪಷ್ಟನೆ ಲಭಿಸಿಲ್ಲ. ಮಂಜು ದೇವಾಲಯ ಪ್ರವೇಶಿಸಿದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಸಿಸಿಟಿವಿ ಕ್ಯಾಮರಾ ಫೂಟೇಜ್ ಪರಿಶೀಲಿಸಿ ಈ ಬಗ್ಗೆ ತಿಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 8 ರಂದು ನಾನು ಶಬರಿಮಲೆ ದೇವಾಲಯ ಪ್ರವೇಶಿಸಿದೆ. ಯಾರೂ ನನ್ನನ್ನು ತಡೆಯಲಿಲ್ಲ. ನಾನು ಪೊಲೀಸರ ಬೆಂಬಲವೂ ಇಲ್ಲದೆ ದೇವಾಲಯ ಪ್ರವೇಶಿಸಿ ಅಲ್ಲೇ ಎರಡು ಗಂಟೆಗಳ ಕಾಲ ಸಮಯ ಕಳೆದೆ ಎಂದು ಮಂಜು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಅವರು ದೇವಾಲಯ ಪ್ರವೇಶಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜನವರಿ 4 ರಂದು ತಾನು ಸಹ ಅಯ್ಯಪ್ಪ ದೇವಾಲಯಕ್ಕೆ ತೆರಳಿ ಅಯ್ಯಪ್ಪನ ದರ್ಶನ ಪಡೆದಿದ್ದೇನೆ ಎಂದು ಶಶಿಕಲಾ ಎಂಬ ಮಹಿಳೆ ಹೇಳಿದ್ದರು. ಪೊಲಿಸರು ಸಹ ಇದನ್ನು ಖಚಿತಪಡಿಸಿದ್ದರು.
10 ರಿಂದ 60 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಅವರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಈ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು.












Click it and Unblock the Notifications