ಸಿಡ್ನಿ ಪ್ರಭಾ ಹತ್ಯೆ ನಿಗೂಢತೆ ಇನ್ನೂ ಬಯಲಾಗಿಲ್ಲ!
ಸಿಡ್ನಿ, ಮಾ.9: ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲೇ ಬೆಂಗಳೂರು ಮೂಲದ ಸಾಫ್ಟ್ ವೇರ್ ಉದ್ಯೋಗಿ ಪ್ರಭಾ ಶೆಟ್ಟಿ ಅವರ ಹತ್ಯೆ ನಡೆದಿದ್ದು ಬರಸಿಡಿಲಿನಂತೆ ಬಂದೆರಗಿದೆ. ಕೊಲೆಯ ಉದ್ದೇಶದ ಬಗ್ಗೆ ಇನ್ನೂ ತನಿಖಾಧಿಕಾರಿಗಳಿಗೆ ಮಾಹಿತಿ ಸಿಕ್ಕಿಲ್ಲ. ಈ ನಡುವೆ ಸೋಮವಾರ ಮಧ್ಯಾಹ್ನ ಸಿಸಿಟಿವಿಯ ದೃಶ್ಯವೊಂದನ್ನು ಡಿಟೇಕ್ಟಿವ್ ಗಳು ಹೊರ ಹಾಕಿದ್ದಾರೆ.
ದಕ್ಷಿಣ ಕನ್ನಡದ ಕಲ್ಲಡ್ಕದ ಅಮ್ಟೂರು ಮೂಲದ ಪ್ರಭಾ ಶೆಟ್ಟಿ ಅವರು ಬೆಂಗಳೂರಿನ ಅರುಣ್ ಕುಮಾರ್ ಅವರನ್ನು ಮದುವೆಯಾಗಿ ಸುಖ ಸಂಸಾರ ನಡೆಸಿದ್ದರು. ಸಿಡ್ನಿಯಲ್ಲಿ ಪ್ರಭಾ ಶೆಟ್ಟಿ ಹತ್ಯೆ ನಡೆಯುವ ವೇಳೆಗೆ ಅವರ ಪುತ್ರಿ ಮೇಘನಾ ಚಂದ್ರಾಲೇಔಟ್ ನಲ್ಲಿ ಸಂಬಂಧಿಕರ ಮನೆಯಲ್ಲಿದ್ದಳು. ತಾಯಿ ಸಾವಿನ ಬಗ್ಗೆ ಇನ್ನೂ ಆಕೆಗೆ ತಿಳಿಸಿಲ್ಲ, ಅಮ್ಮನನ್ನು ನೋಡಲು ಕಾತುರದಿಂದ ಕಾದಿದ್ದ ಕೂಸಿಗೆ ಈ ವಿಷ್ಯ ಹೇಗೆ ಹೇಳುವುದು ಎಂಬ ಸಂಕಟ ಕುಟುಂಬದಲ್ಲಿ ಮನೆ ಮಾಡಿದೆ.

ಶಾರ್ಟ್ ಕಟ್ ತಂದ ಆಪತ್ತು: ಐಟಿ ಕನ್ಸಲ್ಟೆಂಟ್ ಪ್ರಭಾ ಶೆಟ್ಟಿ ಅವರು ಕೆಲಸ ಮುಗಿಸಿ ಮನೆಗೆ ತೆರಳಲು ಇನ್ನೂ 300 ಮೀಟರ್ ದೂರ ಅಷ್ಟೇ ಇತ್ತು. ಅದರೆ, ಶಾರ್ಟ್ ಕಟ್ ಬಳಸಿ ಪಾರ್ಕ್ ಮೂಲಕ ಹಾದು ಹೋಗಲು ನಿರ್ಧರಿಸಿದ್ದು ಆಕೆ ಜೀವಕ್ಕೆ ಕುತ್ತಾಗಿದೆ.41 ವರ್ಷ ವಯಸ್ಸಿನ ಪ್ರಭಾ ಅವರ ಸಾವಿನ ಬಗ್ಗೆ ಸ್ಥಳೀಯರು ಕೂಡಾ ಆತಂಕ ವ್ಯಕ್ತಪಡಿಸಿದ್ದಾರೆ. [ಸಿಡ್ನಿಯಲ್ಲಿ ಬೆಂಗಳೂರಿನ ಮಹಿಳಾ ಟೆಕ್ಕಿ ಹತ್ಯೆ]
ಸಿಡ್ನಿಯ ವೆಸ್ಟ್ ಮೀಡ್ ನ ಅಮೋಸ್ ಸ್ಟೀಟ್ ನಿವಾಸಿ ಪ್ರಭಾ ಅವರ ನೆರೆ ಮನೆಯಾತೆ ಗಣೇಶ್ ಲಿಂಗಮ್ ಮಾತನಾಡಿ ಈ ಘಟನೆ ನಿಜಕ್ಕೂ ಆಘಾತಕಾರಿಯಾಗಿದೆ. ಆಕೆ ಸಹೃದಯಿ, ಪರಮಟ್ಟಾ ಪಾರ್ಕ್ ಬಳಿ ಈ ರೀತಿ ಘಟನೆ ನಡೆದಿರುವುದು ಆತಂಕಕಾರಿ. ನಮ್ಮ ಮನೆ ಮಕ್ಕಳು ಹೇಗೆ ಧೈರ್ಯದಿಂದ ಓಡಾಡಲು ಸಾಧ್ಯ ಎಂಬ ಪ್ರಶ್ನೆ ಮೂಡಿದೆ ಎಂದಿದ್ದಾರೆ.
ಆರೋಪಿ ಸುಳಿವು ಸಿಕ್ಕಿಲ್ಲ: ಮೇಲ್ನೋಟಕ್ಕೆ ಹಣದಾಸೆಗೆ ಪ್ರಭಾ ಅವರ ಕತ್ತು ಕುಯ್ದು ಹತ್ಯೆ ಮಾಡಿರುವ ಸುಳಿವು ಸಿಕ್ಕಿದೆ. ಘಟನಾ ಸ್ಥಳದಲ್ಲಿ ಪ್ರಭಾ ಅವರ ಒಂಟಿ ಸ್ಯಾಂಡಲ್, ಬ್ಯಾಗ್ ಇದೆ. ಸಿಸಿಟಿವಿ ದೃಶ್ಯದಲ್ಲಿ ಆಕೆ ಫೋನಿನಲ್ಲಿ ಮಾತನಾಡಿಕೊಂಡು ಪಾರ್ಕ್ ಕಡೆಗೆ ಬರುವ ದೃಶ್ಯ ಅಷ್ಟೇ ದಾಖಲಾಗಿದೆ. ಘಟನೆ ಬಗ್ಗೆ ಇದುವರೆವಿಗೂ 10 ಜನರನ್ನು ವಿಚಾರಣೆಗೊಳಪಡಿಸಲಾಗಿದ್ದರೂ ಹತ್ಯೆಯ ಮುಖ್ಯ ಉದ್ದೇಶ ಇನ್ನೂ ತಿಳಿದು ಬಂದಿಲ್ಲ ಎಂದು ಡಿಟೆಕ್ಟೀವ್ ಸೂಪರಿಂಟೆಂಡೆಂಟ್ ವಿಲಿಂಗ್ ಅವರು ಹೇಳಿದ್ದಾರೆ. ವಿಡಿಯೋ ಲಿಂಕ್ ಇಲ್ಲಿದೆ ನೋಡಿ












Click it and Unblock the Notifications