ಜಮ್ಮುವಿನಲ್ಲಿ 15 ಸಿಐಎಸ್‌ಎಫ್ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಉಗ್ರರ ದಾಳಿ
ಶ್ರೀನಗರ, ಏಪ್ರಿಲ್ 22 : ಬೆಳಗಿನ ಪಾಳಿಯ ಕರ್ತವ್ಯಕ್ಕೆ ತೆರಳುತ್ತಿದ್ದ 15 ಮಂದಿ ಸಿಐಎಸ್‌ಎಫ್ ಸಿಬ್ಬಂದಿ ಇದ್ದ ಬಸ್ ಮೇಲೆ ಭಯೋತ್ಪಾದಕರು ಗ್ರೇನೆಡ್ ಹಾಗೂ ಗುಂಡಿನ ದಾಳಿ ಮಾಡಿರುವ ಘಟನೆ ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಸಿಐಎಸ್‌ಎಫ್ ಒಬ್ಬ ಎಎಸ್‌ಐ ಹುತಾತ್ಮರಾಗಿದ್ದು, 9 ಮಂದಿ ಯೋಧರು ಗಾಯಗೊಂಡಿದ್ದಾರೆ ಅಂತ ಸೇನಾ ಮೂಲಗಳು ತಿಳಿಸಿದೆ.
ಬೆಳಿಗ್ಗೆ 4.25 ರ ಸುಮಾರಿಗೆ ಉಗ್ರರರು ಯೋಧರಿದ್ದ ಬಸ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಸಿಐಎಸ್‌ಎಫ್ ಯೋಧರು ಕೂಡ ಪ್ರತಿ ದಾಳಿ ನಡೆಸಿದ್ದಾರೆ. ಆದ್ರೆ ಉಗ್ರರು ಆ ಸ್ಥಳ ಬಿಟ್ಟು ಓಡಿ ಹೋಗಿದ್ದಾರೆ ಅಂತ ಸಿಐಎಸ್ಎಫ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜಮ್ಮುವಿನ ಮತ್ತೊಂದು ಕಡೆಯಾದ ಸುಂಜ್ವಾನ್ ಪ್ರದೇಶದಲ್ಲೂ ಭದ್ರತಾ ಪಡೆ ಹಾಗೂ ಉಗ್ರರರ ನಡುವೆ ಗುಂಡಿನ ಕಾಳಗ ನಡೆಯುತ್ತಿದೆ. ಶುಕ್ರವಾರ ಮುಂಜಾನೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಸೇರಿದಂತೆ ಭದ್ರತಾ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತು ನಾಲ್ವರು ಯೋಧರು ಗಾಯಗೊಂಡಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪ್ರಧಾನಿ ಮೋದಿ ಇದೇ ಭಾನುವಾರ ಜಮ್ಮುವಿನ ಸಾಂಬಾ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಮೋದಿ ಭೇಟಿಗೂ ಮುನ್ನವೇ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಹಾವಳಿ ಹೆಚ್ಚಾಗಿದ್ದು, ಭದ್ರತಾ ಪಡೆ ಉಗ್ರರನ್ನ ಮಟ್ಟ ಹಾಕಲು ಪಣ ತೊಟ್ಟಿದೆ. ಪ್ರಧಾನಿ ಬರುವ ದಿನದಂದು ಜಮ್ಮು ಮತ್ತು ಕಾಶ್ಮೀರದಾದ್ಯಂತ ಯಾವುದೇ ಉಗ್ರ ಚಟುವಟಿಕೆಗಳು ನಡೆಯದಂತೆ ಕಣ್ಗಾವಲಿಟ್ಟಿದ್ದು, ಹೆಚ್ಚಿನ ಭದ್ರತೆಯನ್ನ ಒದಗಿಸಿದೆ.

ಇನ್ನು ಭಯೋತ್ಪಾದಕರು ಉಗ್ರರ ನಡುವೆ ಗುಂಡಿನ ಕಾಳಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸೇನಾ ಅಧಿಕಾರಿಗಳು ಸುತ್ತಮುತ್ತಲ ಪ್ರದೇಶದಲ್ಲಿರುವ ಎಲ್ಲಾ ಖಾಸಗಿ, ಸರ್ಕಾರಿ ಶಾಲೆಗಳನ್ನ ಬಂದ್ ಮಾಡಿಸಿದ್ದಾರೆ. ಅಲ್ಲದೆ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ.












Click it and Unblock the Notifications