ಪುಲ್ವಾಮಾ ದಾಳಿಗೆ ಕಾರು ಕೊಟ್ಟಿದ್ದ ಉಗ್ರನ ಹತ್ಯೆ
ಶ್ರೀನಗರ, ಜೂನ್ 18: ಭಾರತೀಯ ಸೇನೆಯು ಜೈನ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಸಜ್ಜದ್ ಭಟ್‌ನನ್ನು ಹತ್ಯೆ ಮಾಡಿದ್ದಾರೆ. ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಈತನ ಕಾರನ್ನೇ ಬಳಕೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಪುಲ್ವಾಮಾ ದಾಳಿಗೆ ಈತ ತನ್ನ ಕಾರು ನೀಡಿದ್ದ, ದಾಳಿಗೂ ಹಾಗೂ ಆತನಿಗೂ ನೇರ ನಂಟಿತ್ತು ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಮುಂದುವರಿದಿರುವ ಭದ್ರತಾಪಡೆಗಳ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.
ಅನಂತ್ನಾಗ್ ಜಿಲ್ಲೆಯ ಬಿಜ್ಬಿಹಾರಾ ಪಟ್ಟಣ ಸಮೀಪದ ಮರ್ಹಾಮಾ ಸಂಗಮ ಎಂಬ ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆಯಿತು. ಇಲ್ಲಿನ ಮನೆಯಲ್ಲಿ ಇನ್ನೂ ಇಬ್ಬರು ಅಥವಾ ಮೂವರು ಉಗ್ರರು ಇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನಾಪಡೆಯ 33 ರಾಷ್ಟ್ರೀಯ ರೈಫಲ್ಸ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಮತ್ತು ಸಿಆರ್ಪಿಎಫ್ನ ಯೋಧರು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಮನೆಯೊಂದರಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾಪಡೆಗಳ ಸಿಬ್ಬಂದಿ ಮಂಗಳವಾರ ಮುಂಜಾನೆ ಆ ಮನೆಯನ್ನು ಸುತ್ತುವರಿದಿದ್ದರು. ಇವರನ್ನು ಕಂಡ ಕೂಡಲೇ ಉಗ್ರರು ಅಂಡರ್ ಬ್ಯಾರಲ್ ಗ್ರನೇಡ್ ಲಾಂಚರ್ (ಯುಬಿಜಿಎಲ್) ಮೂಲಕ ಗ್ರನೇಡ್ ದಾಳಿ ಆರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ಯೋಧರು ದಾಳಿ ನಡೆಸಿದರು ಆಗ ಸಜ್ಜದ್‌ನನ್ನು ಹತ್ಯೆ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು ಇಬ್ಬರು ಉಗ್ರರು ಹತರಾಗಿದ್ದಾರೆ. ಇವರಲ್ಲಿ ಸಜಾದ್ ಬಟ್ ಕೂಡ ಒಬ್ಬ ಎಂದು ಭದ್ರತಾಪಡೆಗಳ ಮೂಲಗಳು ಖಚಿತಪಡಿಸಿವೆ. ಒಬ್ಬ ಯೋಧ ಹುತಾತ್ಮರಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.












Click it and Unblock the Notifications