ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ: ಮುಫ್ತಿ, ಅಬ್ದುಲ್ಲಾ ಬಂಧನ
ಶ್ರೀನಗರ, ಆಗಸ್ಟ್ 05: ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮದಿಂದ ಕಾಶ್ಮೀರ ಕಣಿವೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮತ್ತು ನ್ಯಾಶ್ನಲ್ ಕಾನ್ಫಿರೆನ್ಸ್ ಉಖಂಡ ಒಮರ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿದೆ.
ಕಣಿವೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಜಮ್ಮುಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಮಸೂದೆಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಬೇಕೆಂಬ ಕಾರಣಕ್ಕೇ ಭಾನುವಾರ ರಾತ್ರಿಯೇ ಕಾಶ್ಮೀರದ ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಜೊತೆಗೆ ಮೊಬೈಲ್, ಇಂಟರ್ನೆಟ್ ಸೂಲಭ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಹಿಂಸಾಚಾರವಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿತ್ತು.
ಆದರೆ ಈಗಾಗಲೇ ಈ ವಿಧಿಯನ್ನು ರದ್ದುಗೊಳಿಸಲಾಗಿದ್ದು, ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಸೋಮವಾರ ಸಂಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇಂದ್ರ ಸರ್ಕಾರ ಕಾಶ್ಮೀರಿಗಳಿಗೆ ಮೋಸ ಮಾಡುತ್ತಿದೆ ಎಂದು ಉಭಯ ನಾಯಕರೂ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
"ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಏರ್ಪಡುವ ಸೂಚನೆ ಸಿಕ್ಕಿದ್ದು, ಅದರಲ್ಲಿ ನೀವೂ ಭಾಗಿಯಾಗಲಿದ್ದೀರಿ ಎಂಬ ಸೂಚನೆಯ ಮೇರೆಗೆ ನಿಮ್ಮನ್ನು ಬಂಧಿಸುತ್ತಿದ್ದೇವೆ. ನಿಮ್ಮ ಇತ್ತೀಚಿನ ಹೇಳಿಕೆಗಳು ಮತ್ತು ವರ್ತನೆಗಳು ಅದಕ್ಕೆ ಪುಷ್ಟಿ ನೀಡಿವೆ" ಎಂದು ಮುಫ್ತಿಯವರಿಗೆ ನೀಡಲಾದ ಶ್ರೀನಗರದ ಎಗ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಪತ್ರದಲ್ಲಿ ಹೇಳಲಾಗಿದೆ.












Click it and Unblock the Notifications