WTC Final: ಲಿಯಾನ್ ಮತ್ತು ಅಶ್ವಿನ್ ಬಗ್ಗೆ ದ್ರಾವಿಡ್ ಕನ್ನಡದಲ್ಲಿ ಏನ್ ಹೇಳಿದ್ರು ಗೊತ್ತಾ?
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕನ್ನಡ ಮಾತಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿರುವ ಅವರು, ಕನ್ನಡದಲ್ಲಿ ಮಾತನಾಡಿದ್ದಾರೆ.
ಭಾರತ ತಂಡದ ರವಿಚಂದ್ರನ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ನಾಥನ್ ಲಿಯಾನ್ ಸದ್ಯ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಸ್ಪಿನ್ನರ್ ಗಳು. ಇಬ್ಬರೂ ಕೂಡ ತಮ್ಮ ತಂಡವನ್ನು ಸಾಕಷ್ಟು ಪಂದ್ಯಗಳಲ್ಲಿ ಗೆಲ್ಲಿಸಿದ್ದಾರೆ. ತಮ್ಮ ಮಾರಕ ಬೌಲಿಂಗ್ ಮೂಲಕ ಜಗತ್ತಿನ ಎಂತಹ ಬ್ಯಾಟರ್ ಗಳನ್ನಾದರೂ ಕಟ್ಟಿ ಹಾಕುವ ಸಾಮರ್ಥ್ಯ ಹೊಂದಿದ್ದಾರೆ.

ಭಾರತ ತಂಡದ ಮುಖ್ಯ ಕೋಚ್ ಈ ಇಬ್ಬರು ದಿಗ್ಗಜ ಬೌಲರ್ ಗಳ ಬಗ್ಗೆ ಮಾತನಾಡಿದ್ದಾರೆ. "ರವಿಚಂದ್ರನ್ ಅಶ್ವಿನ್ ಮತ್ತು ನಾಥನ್ ಲಿಯಾನ್ ಇಬ್ಬರು ಶ್ರೇಷ್ಠ ಸ್ಪಿನ್ ಬೌಲರ್ ಗಳು, ಇಬ್ಬರ ನಡುವೆ ವ್ಯತ್ಯಾಸ ಏನಂದ್ರೆ, ಅಶ್ವಿನ್ ಸ್ವಲ್ಪ ಸೈಡ್ ಸ್ಪಿನ್‌ನಲ್ಲಿ ಹಾಕ್ತಾರೆ, ನಾಥನ್ ಲಯಾನ್ ಸ್ವಲ್ಪ ಓವರ್ ಸ್ಪಿನ್‌ನಲ್ಲಿ ಹಾಕ್ತಾರೆ" ಎಂದು ಹೇಳಿದರು.
"ಇಬ್ಬರು ಯಾವಾಗಲೂ ಸ್ಥಿರವಾಗಿ ಬೌಲಿಂಗ್ ಮಾಡುತ್ತಾರೆ, ಲೆಂತ್ ಕಂಟ್ರೋಲ್ ಮಾಡ್ತಾರೆ, ಮಾಜಿ ಕ್ರಿಕೆಟಿಗೆ ಪ್ರಸನ್ನ ಅವರು ಹೇಳುವಂತೆ, ಲೆಂತ್ ಯಾವಾಗಲೂ ಕಡ್ಡಾಯವಾಗಿರುತ್ತದೆ, ಲೈನ್ ಬೌಲರ್ ಗಳ ಆಯ್ಕೆಯಾಗಿರುತ್ತದೆ, ಇಬ್ಬರೂ ಕೂಡ ಲೆಂತ್ ಅನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಬ್ಯಾಟರ್ ಗಳನ್ನು ನೋಡಿಕೊಂಡು, ಲೆಂತ್ ಅನ್ನು ಬದಲಾಯಿಸ್ತಾರೆ, ಲೆಂತ್ ಮೇಲೆ ನಿಮಗೆ ಯಾವಗಲೂ ನಿಯಂತ್ರಣ ಇರಬೇಕು" ಎಂದು ಹೇಳಿದರು.
"ಇತರೆ ಸ್ಪಿನ್ ಬೌಲರ್ ಗಳಿಗಿಂತ ಅಶ್ವಿನ್ ಹಾಗೂ ನಾಥನ್ ಲಿಯಾನ್‌ರನ್ನು ಶ್ರೇಷ್ಠವಾಗಿಸಿರೋದು ಅವರ ಲೆಂತ್. ನಾಥನ್ ಲಿಯಾನ್ ಬೌನ್ಸ್ ಅನ್ನು ಬಳಸುತ್ತಾರೆ. ಇಬ್ಬರ ಲೆಂತ್ ಕೂಡ ಅದ್ಭುತವಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಡುವ ಬಳಗದಿಂದ ಅಶ್ವಿನ್ ಕೈಬಿಟ್ಟ ಟೀಂ ಇಂಡಿಯಾ
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ಭಾರತ ತಂಡ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ರನ್ನು ಕೈಬಿಟ್ಟಿದೆ. ನಾಲ್ಕು ವೇಗಿಗಳು ಒಬ್ಬ ಸ್ಪಿನ್ನರ್ ಜೊತೆ ಕಣಕ್ಕಿಳಿದಿದ್ದು, ಅಶ್ವಿನ್ ತಂಡದಿಂದ ಹೊರಗುಳಿದಿದ್ದಾರೆ. ಅನುಭವಿ ಆಟಗಾರ ಅಶ್ವಿನ್‌ರನ್ನು ಕೈಬಿಟ್ಟಿರುವುದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಉಮೇಶ್ ಯಾದವ್ ಬದಲಾಗಿ ಅಶ್ವಿನ್ ಅವರನ್ನೇ ಆಡಿಸಬೇಕಿತ್ತು ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications