WTC Final: ಭಾರತ ತಂಡದ ಕಳಪೆ ಪ್ರದರ್ಶನ: ಇದೇ ಕಾರಣ ಎಂದ ಅಭಿಮಾನಿಗಳು, ಬಿಸಿಸಿಐಗೆ ತರಾಟೆ
ಲಂಡನ್‌ನ ಕೆನ್ನಿಂಗ್ಟನ್ ಓವಲ್ ಅಂಗಳದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ಗಳಿಗೆ ಆಲೌಟ್ ಮಾಡಿತು, ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿರುವ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.
ಬ್ಯಾಟಿಂಗ್‌ಗೆ ನೆರವಾಗುವ ಪಿಚ್‌ನಲ್ಲಿ ಭಾರತದ ಅಗ್ರ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರು. ನಾಯಕ ರೋಹಿತ್ ಶರ್ಮಾ 15 ರನ್, ಶುಭಮನ್ ಗಿಲ್ 13, ಚೇತೇಶ್ವರ ಪೂಜಾರ 14, ವಿರಾಟ್ ಕೊಹ್ಲಿ 14, ರವೀಂದ್ರ ಜಡೇಜಾ 48 ರನ್ ಗಳಿಸಿ ಔಟಾದರು. ಜಡೇಜಾ ಅವರನ್ನು ಹೊರತು ಪಡಿಸಿ ಉಳಿದ ನಾಲ್ಕು ಬ್ಯಾಟರ್ ಗಳು ವಿಫಲವಾದರು.

ಅಜಿಂಕ್ಯ ರಹಾನೆ ಅಜೇಯ 29 ಮತ್ತು ಕೆಎಸ್ ಭರತ್ ಅಜೇಯ 5 ರನ್ ಗಳಿಸಿದ್ದು, ಮೂರನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಭಾರತ ಫಾಲೋ ಆನ್‌ನಿಂದ ತಪ್ಪಿಸಿಕೊಳ್ಳಲು ಇನ್ನೂ 120 ರನ್ ಗಳಿಸಬೇಕಾಗಿದೆ, ಮೂರನೇ ದಿನ 120 ರನ್‌ಗಿಂತ ಕಡಿಮೆ ರನ್ ಗಳಿಸುವಷ್ಟರಲ್ಲಿ ಆಲೌಟ್ ಆದರೆ ಭಾರತದ ಮೇಲೆ ಫಾಲೋ ಆನ್ ಹೇರುವ ಸಾಧ್ಯತೆ ಇದ್ದು, ಭಾರತದ ಗೆಲುವು ಕನಸಾಗಲಿದೆ.
ಸಿಡಿದೆದ್ದ ಅಭಿಮಾನಿಗಳು
ಭಾರತ ತಂಡದ ಕಳಪೆ ಪ್ರದರ್ಶನ ಕಂಡ ಕ್ರಿಕೆಟ್ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಐಪಿಎಲ್ ವಿರುದ್ಧ ಕಿಡಿ ಕಾರಿದ್ದು, ಆಟಗಾರರ ಕೆಟ್ಟ ಪ್ರದರ್ಶನಕ್ಕೆ ಐಪಿಎಲ್ ಕಾರಣ ಎಂದು ದೂರಿದ್ದಾರೆ. ಇನ್ನು ಎಲ್ಲಾ ಗೊತ್ತಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸಜ್ಜಾಗಲು ಆಟಗಾರರಿಗೆ ಸಮಯ ಸಿಗದಂತೆ ಐಪಿಎಲ್ ಆಯೋಜನೆ ಮಾಡಿದ್ದಕ್ಕೆ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸತತ ಎರಡು ತಿಂಗಳು ಕ್ರಿಕೆಟ್ ಆಡಿ ದಣಿದಿರುವ ಆಟಗಾರರು ಸರಿಯಾಗಿ ವಿಶ್ರಾಂತಿ ಕೂಡ ಪಡೆಯದೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ, ಆಟಗಾರರ ಮೇಲೆ ಒತ್ತಡವಿದೆ ಎಂದು ಅಭಿಮಾನಿಗಳು ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ತಿಂಗಳು ಟಿ20 ಪಂದ್ಯಗಳನ್ನು ಆಡಿ ಕಡಿಮೆ ಸಮಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಹೊಂದಿಕೊಳ್ಳಲು ಆಟಗಾರರಿಗೆ ಕಷ್ಟವಾಗುತ್ತದೆ. ಅಲ್ಲದೆ ಇಂಗ್ಲೆಂಡ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಆಟಗಾರರಿಗೆ ಹೆಚ್ಚಿನ ಸಮಯ ಕೂಡ ಸಿಕ್ಕಿಲ್ಲ, ಮೇ 29ರಂದು ಐಪಿಎಲ್ ಫೈನಲ್ ಪಂದ್ಯ ಮುಗಿದ ಕಾರಣ, ಭಾರತ ತಂಡ ಇಂಗ್ಲೆಂಡ್‌ನಲ್ಲಿ ಒಂದು ಅಭ್ಯಾಸ ಪಂದ್ಯವನ್ನು ಆಡದೆ, ಫೈನಲ್‌ನಲ್ಲಿ ಆಡುತ್ತಿರುವುದು ಇಂದಿನ ಪರಿಸ್ಥಿತಿಗೆ ಕಾರಣ ಎಂದು ದೂರಿದ್ದಾರೆ.












Click it and Unblock the Notifications