WTC Final 2023: ಮುಂದುವರೆದ ಭಾರತದ ವೈಫಲ್ಯ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ಆಸ್ಟ್ರೇಲಿಯಾ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತ ತಂಡವನ್ನು 209 ರನ್‌ಗಳಿಂದ ಸೋಲಿಸುವ ಮೂಲಕ ಕಪ್ ಗೆದ್ದುಕೊಂಡಿದೆ. ಎಲ್ಲಾ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಎನಿಸಿಕೊಂಡ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಗಿದೆ.
ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಭಾರತ ತಂಡವನ್ನು ಕಟ್ಟಿಹಾಕಿತು. ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 469 ರನ್‌ಗಳನ್ನು ಕಲೆಹಾಕಿತು. ಡೇವಿಡ್ ವಾರ್ನರ್ 43 ರನ್ ಗಳಿಸಿದರೆ, ಸ್ಟೀವ್ ಸ್ಮಿತ್ 121 ರನ್ ಗಳಿಸಿದರು, ಟ್ರಾವಿಸ್ ಹೆಡ್ ಅಮೋಘ 163 ರನ್ ಗಳಿಸುವ ಮೂಲಕ ಮಿಂಚಿದರು. ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 48 ರನ್ ಗಳಿಸಿದರು. ಭಾರತದ ಪರವಾಗಿ ಮೊಹಮ್ಮದ್ ಶಮಿ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 4 ವಿಕೆಟ್, ಶಾರ್ದೂಲ್ ಠಾಕೂರ್ 2, ಜಡೇಜಾ 1 ವಿಕೆಟ್ ಪಡೆದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ 296 ರನ್‌ಗಳಿಗೆ ಆಲೌಟ್ ಆಯಿತು. ರೋಹಿತ್ ಶರ್ಮಾ 15, ಶುಭಮನ್ ಗಿಲ್ 13, ಚೇತೇಶ್ವರ ಪೂಜಾರ 14, ವಿರಾಟ್ ಕೊಹ್ಲಿ 14 ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದರು. ಅಜಿಂಕ್ಯ ರಹಾನೆ 89 ರನ್ ಗಳಿಸಿದರೆ, ಜಡೇಜಾ 48, ಶಾರ್ದೂಲ್ 51 ರನ್ ಗಳಿಸಿದರು. ಮಿಚೆಲ್ ಸ್ಟಾರ್ಕ್, ಬೊಲ್ಯಾಂಡ್ ಮತ್ತು ಕೆಮರಾನ್ ಗ್ರೀನ್ ತಲಾ 2 ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರು, ನಾಥನ್ ಲಿಯಾನ್ 1 ವಿಕೆಟ್ ಪಡೆದರು.
ಬೃಹತ್ ಮುನ್ನಡೆ ಪಡೆದ ಆಸ್ಟ್ರೇಲಿಯಾ
ಮೊದಲನೇ ಇನ್ನಿಂಗ್ಸ್‌ನಲ್ಲಿ 173 ರನ್‌ಗಳ ಬೃಹತ್ ಮುನ್ನಡೆ ಪಡೆದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 270 ರನ್ ಗಳಿಗೆ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ 444 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ನಸ್ ಲಾಬುಸ್ಚಾಗ್ನೆ 41, ಸ್ಟೀವ್ ಸ್ಮಿತ್ 34, ಅಲೆಕ್ಸ್ ಕ್ಯಾರಿ 66, ಮಿಚೆಲ್ ಸ್ಟಾರ್ಕ್ 41 ರನ್ ಗಳಿಸಿದರು.
444 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಸಿಕ್ಕಿತು. ಶುಭಮನ್ ಗಿಲ್ 18 ರನ್ ಗಳಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ರೋಹಿತ್ ಶರ್ಮಾ 43, ವಿರಾಟ್ ಕೊಹ್ಲಿ 49, ಅಜಿಂಕ್ಯ ರಹಾನೆ 46 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಆಲೌಟ್ ಆಗುವ ಮೂಲಕ 209 ರನ್‌ಗಳ ಸೋಲು ಕಂಡಿತು. ಅದ್ಭುತ ಶತಕ ಗಳಿಸಿದ ಟ್ರಾವಿಸ್ ಹೆಡ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಭಾರತ ತಂಡ ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆದ್ದಿಲ್ಲ, ಸತತ ಎರಡನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದ್ದ ಭಾರತ ಎರಡನೇ ಬಾರಿ ಕೂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಇದೇ ವರ್ಷ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಕೂಡ ಇದ್ದು, ಭಾರತ ಅದರತ್ತ ಗಮನಹರಿಸಲಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.












Click it and Unblock the Notifications