ಲೈಂಗಿಕ ಕಿರುಕುಳ ಖಂಡಿಸಿ ರೆಸ್ಲರ್ಸ್ ಪ್ರತಿಭಟನೆ; ಭಾರತದ ಪ್ರತಿಷ್ಠೆಗೆ ಕಳಂಕ ಎಂದ ಪಿಟಿ ಉಷಾ
ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ( WFI ) ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿರುವ ರೆಸ್ಲರ್‌ಗಳು ಕಳೆದ ಮೂರ್ನಾಲ್ಕು ದಿನಗಳಿಂದ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಧರಣಿ ನಡೆಸುತ್ತಿದ್ದಾರೆ.
ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಹಾಗೂ ಸಾಕ್ಷಿ ಮಲ್ಲಿಕ್ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸದ್ಯ ಈ ಸುದ್ದಿ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದ್ದು, ಹಲವರು ಈ ಕುರಿತು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ.

ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ಸ್ ( IOA ) ಅಧ್ಯಕ್ಷೆ ಪಿಟಿ ಉಷಾ ಇಂದು ( ಏಪ್ರಿಲ್ 27 ) ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ಸ್‌ನ ಕಮಿಟಿ ಸಭೆ ಮುಗಿದ ಬಳಿಕ ಮಾಧ್ಯಮದವರ ಮುಂದೆ ಬಂದು "ರೆಸ್ಲರ್‌ಗಳು ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರುವುದು ಅಶಿಸ್ತಿನಿಂದ ಕೂಡಿದೆ. ಇದು ಭಾರತದ ಪ್ರತಿಷ್ಠೆಗೆ ಕಳಂಕ" ಎಂದು ಹೇಳಿಕೆ ನೀಡಿದರು.
ಏನಿದು ಪ್ರತಿಭಟನೆ?
ಕಳೆದ ಜನವರಿ ತಿಂಗಳಿನಲ್ಲಿ ಭಾರತದ ಟಾಪ್ ರೆಸ್ಲರ್‌ಗಳಾದ ವಿನೀಶ್ ಫೋಗಟ್, ಭಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲ್ಲಿಕ್ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ( WFI ) ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿ ಕಿರುಕುಳದ ಗಂಭೀರ ಆರೋಪವನ್ನು ಮಾಡಿದ್ದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಿ ಎಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.
ದೆಹಲಿ ಪೊಲೀಸರಿಗೆ ದೂರನ್ನೂ ಸಹ ನೀಡಿದ್ದರು. ಆದರೆ ದೂರು ನೀಡಿ ಮೂರು ತಿಂಗಳುಗಳು ಕಳೆದರೂ ಸಹ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಮತ್ತೆ ರೆಸ್ಲರ್‌ಗಳು ರೊಚ್ಚಿಗೆದ್ದಿದ್ದಾರೆ. ಈ ಬಾರಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವವರೆಗೂ ಪ್ರತಿಭಟನೆ ನಡೆಸಲು ರೆಸ್ಲರ್‌ಗಳು ತೀರ್ಮಾನಿಸಿ ಬೀದಿಗೆ ಇಳಿದಿದ್ದಾರೆ.
"ಪ್ರತಿಷ್ಠಿತ ಕುಸ್ತಿ ಸ್ಪರ್ಧೆಗಳಲ್ಲಿ ಈ ದೇಶಕ್ಕೆ ಪ್ರಶಸ್ತಿಗಳನ್ನು ತಂದುಕೊಟ್ಟ ಹಲವು ಮಹಿಳಾ ರೆಸ್ಲರ್‌ಗಳು WFI ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರಿಂದ ಲೈಂಗಿಕ ಶೋಷಣೆಗೆ ಹಾಗೂ ಕಿರುಕುಳಕ್ಕೆ ಒಳಗಾಗಿದ್ದಾರೆ. 21.04.2023 ರಂದು ದೂರು ನೀಡಿದ್ದರೂ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳುತ್ತಿಲ್ಲ" ಎಂದು ಟ್ವೀಟ್ ಮಾಡಿದ್ದ ವಿನೇಶ್ ಫೋಗಟ್ ಕಿಡಿಕಾರಿದ್ದರು.
ಇನ್ನು ಈ ಬಾರಿ ಏಳು ಮಹಿಳಾ ರೆಸ್ಲರ್‌ಗಳು ಹೊಸ ದೂರುಗಳೊಂದಿಗೆ ಬಂದಿದ್ದು, ಬ್ರಿಜ್ ಭೂಷಣ್ ಶರಣ್ ಸಿಂಗ್ ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಲಕ್ಷಣಗಳೂ ಸಹ ಕಾಣಸಿಗುತ್ತಿವೆ. ಈ ದೂರಿನ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ ಎಂದು ಕಿಡಿಕಾರಿರುವ ಸಾಕ್ಷಿ ಮಲ್ಲಿಕ್ "ಮಹಿಳಾ ಕುಸ್ತಿಪಟುಗಳ ಹೇಳಿಕೆಯನ್ನು ದಾಖಲಿಸಿಕೊಂಡಿರುವ ವರದಿಯು ಸಾರ್ವಜನಿಕವಾಗಬೇಕೆಂದು ನಾವು ಬಯಸುತ್ತೇವೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ದೂರು ನೀಡಿದವರಲ್ಲಿ ಅಪ್ರಾಪ್ತ ಬಾಲಕಿಯೂ ಇದ್ದಾರೆ" ಎಂದಿದ್ದರು.
ಮೋದಿಗೂ ಮನವಿ
ದೂರನ್ನು ಸ್ವೀಕರಿಸದ ಕಾರಣ ರೊಚ್ಚಿಗೆದ್ದಿರುವ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವವರೆಗೂ ಊಟ, ನಿದ್ರೆ ಎಲ್ಲಾ ಇಲ್ಲೇ ಎಂದು ಘೋಷಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಈ ಪ್ರಕರಣಗಳಲ್ಲಿ ಬಿಜೆಪಿ ಎಂಪಿಯ ಹೆಸರೂ ಸಹ ತಳುಕಿಹಾಕಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಪ್ರತಿಭಟನಾನಿರತ ರೆಸ್ಲರ್ಸ್ ನೇರವಾಗಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.
"ಪ್ರಧಾನಿ ಮೋದಿ ಸರ್ 'ಬೇಟಿ ಬಚಾವೋ' ಮತ್ತು 'ಬೇಟಿ ಪಢಾವೋ' ಬಗ್ಗೆ ಮಾತನಾಡುತ್ತಾರೆ ಮತ್ತು ಪ್ರತಿಯೊಬ್ಬರ 'ಮನ್ ಕಿ ಬಾತ್' ಅನ್ನು ಆಲಿಸುತ್ತಾರೆ. ನಮ್ಮ 'ಮನ್ ಕಿ ಬಾತ್' ಕೇಳಲು ಆಗುವುದಿಲ್ವಾ? ನಾವು ಪದಕಗಳನ್ನು ಗೆದ್ದಾಗ ನಮ್ಮನ್ನು ಅವರ ಮನೆಗೆ ಆಹ್ವಾನಿಸುತ್ತಾರೆ ಮತ್ತು ನಮಗೆ ಗೌರವವನ್ನು ನೀಡುತ್ತಾರೆ. ನಮ್ಮನ್ನು ಅವರ ಮಕ್ಕಳು ಎಂದು ಕರೆಯುತ್ತಾರೆ. ಇಂದು ಅವರು ನಮ್ಮ ಮನ್ ಕಿ ಬಾತ್ ಕೇಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ" ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.












Click it and Unblock the Notifications