India vs Pakistan: ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ವೇಳಾಪಟ್ಟಿಯಲ್ಲಿ ಬದಲಾವಣೆ- ದಿನಾಂಕ, ಕಾರಣ ತಿಳಿಯಿರಿ
ನವದೆಹಲಿ, ಜುಲೈ 31: ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಐಸಿಸಿ ವಿಶ್ವಕಪ್ ಪಂದ್ಯದ ವೇಳಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಪಂದ್ಯವನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಇದು ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.
ಈ ಮೊದಲು ಅಕ್ಟೋಬರ್ 15 ರಂದು ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಿಗದಿಯಾಗಿತ್ತು. ಈ ಪಂದ್ಯವನ್ನು ಒಂದು ದಿನ ಮೊದಲು ಅಂದರೆ ಅಕ್ಟೋಬರ್ 14 ಕ್ಕೆ ನಡೆಸಲಾಗುತ್ತದೆ ಎಂದು 'ಇಂಡಿಯಾ ಟುಡೇ' ಮಾಹಿತಿ ನೀಡಿದೆ.

ಆದರೆ, ಇದುವರೆಗೆ ಬಿಸಿಸಿಐ ಆಗಲಿ, ಐಸಿಸಿಯಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಮೂಲಗಳು ತಿಳಿಸಿರುವ ಮಾಹಿತಿ ಪ್ರಕಾರ, ಅಕ್ಟೋಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.
ಕಾರಣವೇನು?
ನವರಾತ್ರಿಯ ಕಾರಣದಿಂದಾಗಿ ಈ ಮಹತ್ವದ ಪಂದ್ಯವನ್ನು ಮರು ನಿಗದಿಪಡಿಸಲು ಐಸಿಸಿ ಚಿಂತನೆ ನಡೆಸುತ್ತಿದೆ ಎಂಬ ವರದಿಗಳು ಪ್ರಕಟಗೊಂಡಿದ್ದವು. ನವರಾತ್ರಿಯ ಹಿನ್ನೆಲೆಯಲ್ಲಿ ಪಂದ್ಯ ನಡೆಸುವುದು ಸೂಕ್ತವಲ್ಲ. ಈ ವೇಳಾಪಟ್ಟಿಯನ್ನು ಬದಲಾಯಿಸಬೇಕು ಎಂದು ಸ್ಥಳೀಯ ಅಧಿಕಾರಿಗಳು ಬಿಸಿಸಿಐಗೆ ಒತ್ತಾಯಿಸಿದ್ದಾರೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ನವರಾತ್ರಿ ಹಿನ್ನೆಲೆಯಲ್ಲಿ ಸೂಕ್ತ ವ್ಯವಸ್ಥೆ ಹಾಗೂ ಭದ್ರತೆ ನೀಡುವುದು ಕಷ್ಟಕರವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂಗ್ಲೆಂಡ್- ಅಫ್ಘಾನಿಸ್ತಾನ ಪಂದ್ಯದ ದಿನಾಂಗಗಳನ್ನು ಬದಲಾವಣೆ ಮಾಡಬಹುದು ಎಂಬ ಮಾಹಿತಿಯೂ ಲಭ್ಯವಾಗಿದೆ. ಏಕದಿನ ವಿಶ್ವಕಪ್ 2023 ರ ವೇಳಾಪಟ್ಟಿಯಲ್ಲಿಯಷ್ಟೇ ಬದಲಾವಣೆಗಳು ಆಗಲಿವೆ. ಪಂದ್ಯಗಳ ನಡೆಯುವ ಸ್ಥಳಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯದ ಹೊಸ ದಿನಾಂಕದಿಂದ ಸ್ಥಳೀಯ ಆಡಳಿತಕ್ಕೆ ಸಹಾಯವಾಗಬಹುದು. ಆದರೆ, ಈಗಾಗಲೇ ಅಕ್ಟೋಬರ್ 15 ರ ವೇಳಾಪಟ್ಟಿಯ ಪ್ರಕಾರ ವ್ಯವಸ್ಥೆಗಳನ್ನು ಮಾಡಿಕೊಂಡಿರುವ ಸಾವಿರಾರು ಕ್ರಿಕೆಟ್ ಅಭಿಮಾನಿಗಳಿಗೆ ದಿನಾಂಕ ಬದಲಾವಣೆಯು ಬೇಸರವನ್ನು ಉಂಟುಮಾಡುವುದು ಖಚಿತವಾಗಿದೆ. ರೋಚಕ ಪಂದ್ಯವನ್ನು ವೀಕ್ಷಿಸಲು ಅಹಮದಾಬಾದ್‌ನಲ್ಲಿ ಅಭಿಮಾನಿಗಳು ಈಗಾಗಲೇ ಹೋಟೆಲ್‌ಗಳನ್ನು ಬುಕ್ ಮಾಡಿದ್ದಾರೆ ಎಂಬುದರ ಕುರಿತು ವರದಿಯಾಗಿದೆ.
ಕ್ರಿಕೆಟ್ ಪ್ರೇಮಿಗಳು ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಲು ಮತ್ತು ಕೊನೆಯ ಕ್ಷಣದ ಬುಕಿಂಗ್ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಈಗಾಗಲೇ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ, ಹೋಟೆಲ್ ರೂಮ್ ಬಾಡಿಗೆಗಳು 10 ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications