Ind vs Eng: ಭಾರತ ತಂಡಕ್ಕೆ ಮತ್ತೆ ಕನ್ನಡಿಗರ ಎಂಟ್ರಿ ಫಿಕ್ಸ್?
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿರುವ ಬಿಸಿಸಿಐ, ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಇನ್ನೂ ಭಾರತ ತಂಡವನ್ನು ಆಯ್ಕೆ ಮಾಡಿಲ್ಲ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ ಮುಗಿದ ಬಳಿಕ ತಂಡವನ್ನು ಆಯ್ಕೆ ಮಾಡುವುದಾಗಿ ತಿಳಿಸಿದೆ. ಜನವರಿ 18ರಂದು ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯ ನಡೆಯಲಿದ್ದು ಬಳಿಕ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ.
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಹಲವು ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು ಭಾರತ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಆದರೆ ಇಬ್ಬರು ಕನ್ನಡಿಗರು ಮಾತ್ರ ಎಲ್ಲರಿಗಿಂತ ಅತ್ಯುತ್ತಮ ಪ್ರದರ್ಶನ ನೀಡಿದ್ದು ಭಾರತ ತಂಡಕ್ಕೆ ವಾಪಸಾತಿ ಮಾಡುವ ವಿಶ್ವಾಸದಲ್ಲಿದ್ದಾರೆ.

ಕರುಣ್ ನಾಯರ್ ಗೆ ಸಿಗುತ್ತಾ ಅವಕಾಶ?
ಕರ್ನಾಟಕ ತಂಡದಲ್ಲಿ ಅವಕಾಶ ಸಿಗದ ಕಾರಣ ವಿದರ್ಭ ತಂಡಕ್ಕಾಗಿ ಆಡುತ್ತಿರುವ ಕರುಣ್ ನಾಯರ್ ಈ ಬಾರಿ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ನಾಟೌಟ್ ಆಗಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಲ್ಲದೆ, ಸತತವಾಗಿ ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ.
ಈವರೆಗೂ ಆಡಿರುವ 7 ಪಂದ್ಯಗಳಲ್ಲಿ 664 ರನ್ ಕಲೆಹಾಕಿರುವ ಅವರು 120 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 80 ಬೌಂಡರಿ, 11 ಸಿಕ್ಸರ್ ಬಾರಿಸಿದ್ದಾರೆ. ಐದು ಶತಕ ಗಳಿಸಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವಾಗ ಕರುಣ್ ನಾಯರ್ ತಂಡಕ್ಕೆ ಉತ್ತಮ ಆಯ್ಕೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಮಾಜಿ ಆಟಗಾರ ಹರ್ಭಜನ್ ಸಿಂಗ್ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು ಕರುಣ್ ನಾಯರ್ ಗೆ ಭಾರತ ತಂಡದಲ್ಲಿ ಅವಕಾಶ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಭಾರತ ತಂಡದಲ್ಲಿ ಅವಕಾಶ ಸಿಗುತ್ತದೆ ಎನ್ನುವುದಾದರೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವವರಿಗೆ ಯಾಕೆ ಅವಕಾಶ ನೀಡಬಾರದು ಎಂದು ಹರ್ಭಜನ್ ಪ್ರಶ್ನೆ ಮಾಡಿದ್ದಾರೆ. ಒಂದು ವೇಳೆ ಕರುಣ್ ನಾಯರ್ ಅವರಿಗೆ ಭಾರತ ತಂಡದಲ್ಲಿ ಅವಕಾಶ ಸಿಗದೇ ಇದ್ದರೆ ಇದು ಅವರಿಗೆ ಮಾಡುವ ಅನ್ಯಾಯ ಎಂದು ಕೂಡ ಹೇಳಿದ್ದಾರೆ.
2017ರಲ್ಲಿ ಕರುಣ್ ನಾಯರ್ ಕೊನೆಯ ಬಾರಿಗೆ ಭಾರತದ ಪರವಾಗಿ ಆಡಿದ್ದು. 2017ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ತ್ರಿಶತಕ ಗಳಿಸಿದರೂ ಕರುಣ್ ನಾಯರ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು.
ಮಯಾಂಕ್ ಅಗರ್ವಾಲ್‌ಗೆ ಅವಕಾಶ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿರುವ ಮಯಾಂಕ್ ಅಗರ್ವಾಲ್, ಪಂದ್ಯಾವಳಿಯಲ್ಲಿ ಕರುಣ್ ನಾಯರ್ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಿದ್ದಾರೆ. ಆಡಿರುವ 9 ಪಂದ್ಯಗಳಲ್ಲಿ 103.17 ಸರಾಸರಿಯಲ್ಲಿ 619 ರನ್ ಗಳಿಸಿದ್ದು, 109.17 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 67 ಬೌಂಡರಿ 18 ಸಿಕ್ಸರ್ ಬಾರಿಸಿದ್ದಾರೆ. ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿ ಇಲ್ಲದ ಕಾರಣ ಮಯಾಂಕ್ ಅಗರ್ವಾಲ್‌ಗೆ ಅವಕಾಶ ನೀಡಬಹುದು.












Click it and Unblock the Notifications