PV Sindhu Marriage: ಪಿ.ವಿ. ಸಿಂಧು ಮದುವೆ ಆಗುತ್ತಿರುವ ಹುಡುಗನಿಗೂ ಇತ್ತು ಐಪಿಎಲ್ ನಂಟು
ಒಲಿಂಪಿಕ್ ಪದಕ ವಿಜೇತೆ, ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಡಿಸೆಂಬರ್ 22 ರಂದು ಮದುವೆ ನಡೆಯಲಿದ್ದು, ಹೈದಾರಾಬಾದ್ ಮೂಲದ ಹುಡುಗನನ್ನು ಕೈಹಿಡಿಯಲಿದ್ದಾರೆ. ಎರಡು ಕುಟುಂಬಗಳ ಪರಸ್ಪರ ಒಪ್ಪಿಗೆಯಿಂದ ಮದುವೆ ನಡೆಯುತ್ತಿದ್ದು, ಒಟ್ಟು ಐದು ದಿನಗಳ ಕಾಲ ಮದುವೆ ಸಂಭ್ರಮ ನಡೆಯಲಿದೆ. ಉದಯಪುರದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಆರತಕ್ಷತೆ ಹೈದರಾಬಾದ್‌ನಲ್ಲಿ ನಡೆಸಲು ಕುಟುಂಬಗಳು ತೀರ್ಮಾನಿಸಿವೆ.
ಲಕ್ನೋದಲ್ಲಿ ಸೈಯದ್ ಮೋದಿ ಅಂತಾರಾಷ್ಟ್ರೀಯ ಟ್ರೋಫಿ ಗೆದ್ದು ದೀರ್ಘಕಾಲದ ಪ್ರಶಸ್ತಿ ಬರವನ್ನು ಕೊನೆಗೊಳಿಸಿರುವ ಸಂತಸದ ಸಂದರ್ಭದಲ್ಲೇ ಅವರ ಮದುವೆ ಸುದ್ದಿ ಬಂದಿದೆ. ಪಿಟಿಐ ವರದಿ ಮಾಡಿರುವ ಪ್ರಕಾರ ಮದುವೆ ಕಾರ್ಯಕ್ರಮಗಳು ಡಿಸೆಂಬರ್ 20ರಂದು ಆರಂಭವಾಗಲಿದ್ದು 22ರಂದು ಮದುವೆ ನಡೆಯಲಿದೆ. ಬಳಿಕ ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಪಿವಿ ಸಿಂಧು ಕೈಹಿಡಿಯುವ ಹುಡುಗ ಯಾರು, ಕೆಲಸ ಏನು ಎನ್ನುವ ಮಾಹಿತಿ ಇಲ್ಲಿದೆ.

ಎರಡೂ ಕುಟುಂಬಗಳಿಗೆ ಮೊದಲಿನಿಂದಲೇ ಪರಿಚಯವಿದ್ದರೂ ಒಂದು ತಿಂಗಳ ಹಿಂದಷ್ಟೇ ಮದುವೆಯನ್ನು ನಿಗದಿ ಮಾಡಲಾಗಿದೆ. ಜನವರಿಯಲ್ಲಿ ಪಿ.ವಿ. ಸಿಂಧು ಹೆಚ್ಚಿನ ಟೂರ್ನಿಯಲ್ಲಿ ಭಾಗವಹಿಸಲಿರುವ ಕಾರಣ ಡಿಸೆಂಬರ್ ನಲ್ಲಿ ಮದುವೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಪಿವಿ ಸಿಂಧು ಅವರ ತಂದೆ ಪಿವಿ ರಮಣ ಪಿಟಿಐಗೆ ತಿಳಿಸಿದ್ದಾರೆ.
ವೆಂಕಟದತ್ತ ಸಾಯಿ ಯಾರು?
ಪಿವಿ ಸಿಂಧು ಮದುವೆಯಾಗುತ್ತಿರುವ ಹುಡುಗನ ಹೆಸರು ವೆಂಕಟದತ್ತ ಸಾಯಿ. ಹೈದರಾಬಾದ್ ಮೂಲದವರೇ ಆದರು ಸದ್ಯ ಜೈಪುರದಲ್ಲಿ ನೆಲೆಸಿದ್ದಾರೆ. ಪೊಸಿಡೆಕ್ಸ್ ಟೆಕ್ನಾಲಜೀಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಫೌಂಡೇಶನ್ ಆಫ್ ಲಿಬರಲ್ ಮತ್ತು ಮ್ಯಾನೇಜ್‌ಮೆಂಟ್ ಎಜುಕೇಶನ್‌ನಿಂದ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್/ಲಿಬರಲ್ ಸ್ಟಡೀಸ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಫ್ಲೇಮ್ ಯೂನಿವರ್ಸಿಟಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಅಕೌಂಟಿಂಗ್ ಮತ್ತು ಫೈನಾನ್ಸ್ ವಿಭಾಗದಲ್ಲಿ ಬಿಬಿಎ ಪೂರ್ಣಗೊಳಿಸಿದ್ದು, ಬೆಂಗಳೂರಿನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಿಂದ ಡೇಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ಐಪಿಎಲ್ ಫ್ರಾಂಚೈಸಿ ಜೊತೆ ನಂಟು
ಶಿಕ್ಷಣ ಪೂರ್ಣವಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯೂನಲ್ಲಿ ಇಂಟರ್ನ್ ಮತ್ತು ಆಂತರಿಕ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಇಲ್ಲಿ ಕೆಲಸ ಮಾಡುವ ಮೂಲಕ ನಾನು ಸಾಕಷ್ಟು ಕಲಿತಿದ್ದೇನೆ ಎಂದು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 2019ರಿಂದ ಪೊಸಿಡೆಕ್ಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.












Click it and Unblock the Notifications