KKR vs SRH: ಎರಡೂ ಕೈಗಳಲ್ಲೂ ಬೌಲಿಂಗ್! ಗಮನ ಸೆಳೆದ ಎಸ್ಆರ್‌ಎಚ್ ಬೌಲರ್
ಇದು ಅಪರೂಪದಲ್ಲೇ ಅಪರೂಪವಾದ ಕೌಶಲ್ಯ, ಸಾಮಾನ್ಯವಾಗಿ ಎಡಗೈ ಬೌಲರ್, ಬಲಗೈ ಬೌಲರ್ ನೋಡಿರುತ್ತೇವೆ. ವಿಶೇಷ ಎನ್ನುವಂತ ಎಡಗೈ ಬ್ಯಾಟಿಂಗ್ ಮಾಡುವ ಆಟಗಾರ ಬಲಗೈ ಬೌಲರ್ ಆಗಿರುತ್ತಾರೆ ಅಥವಾ ಇದಕ್ಕೆ ತದ್ವಿರುದ್ಧ ಇರುವುದುನ್ನು ನೋಡಬಹುದು. ಆದರೆ ಒಬ್ಬನೇ ಆಟಗಾರ ಎಡಗೈನಲ್ಲೂ ಬೌಲಿಂಗ್ ಬಲಗೈನಲ್ಲೂ ಬೌಲಿಂಗ್ ಮಾಡುವುದು ತುಂಬಾ ಅಪರೂಪ, ಐಪಿಎಲ್ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರೇಕ್ಷಕರನ್ನು ಅದಕ್ಕೆ ಸಾಕ್ಷಿಯಾದರು.
ಶ್ರೀಲಂಕಾದ ಆಲ್‌ರೌಂಡರ್ ಕಮಿಂದು ಮೆಂಡಿಸ್ ಆಲ್‌ರೌಂಡರ್ ಆಟಕ್ಕೆ ಹೆಸರಾಗಿದ್ದಾರೆ. ಈಗಾಗಲೇ ಶ್ರೀಲಂಕಾ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿರುವ ಅವರು, ಗುರುವಾರ ತಮ್ಮ ಮೊದಲ ಪಂದ್ಯ ಆಡುವ ಅವಕಾಶ ಪಡೆದರು.

26 ವರ್ಷದ ಕಮಿಂದು ಮೆಂಡಿಸ್ ಮೊದಲ ಪಂದ್ಯದಲ್ಲೇ ಎರಡೂ ಕೈಗಳಲ್ಲಿ ಬೌಲಿಂಗ್ ಮಾಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದರು. ಅವರು ಕೇವಲ ಎಡಗೈಯಿಂದಲ್ಲ, ಬಲಗೈಯಿಂದಲೂ ಬೌಲಿಂಗ್ ಮಾಡಿದರು. ಕೆಕೆಆರ್ ವಿರುದ್ಧದ ಪಂದ್ಯದ ಸಮಯದಲ್ಲಿ, ಅವರು ಅಂಗ್‌ಕ್ರಿಶ್ ರಘುವಂಶಿಗೆ ಎಡಗೈ ಸ್ಪಿನ್ ಅನ್ನು ಬೌಲಿಂಗ್ ಮಾಡಿದರೆ ಬಳಿಕ ವೆಂಕಟೇಶ್ ಅಯ್ಯರ್ ಕ್ರೀಸ್‌ಗೆ ಬಂದಾಗ ಬಲಗೈ ಸ್ಪಿನ್ನರ್ ಆಗಿ ಬದಲಾದರು.
ಐಪಿಎಲ್‌ನಲ್ಲಿ ಇದು ಮೊದಲ ಬಾರಿ ನಡೆದಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಮಿಂದು ಮೆಂಡಿಸ್ ಭಾರತದ ವಿರುದ್ಧವೇ ಈ ರೀತಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. 2024 ರಲ್ಲಿ ಭಾರತದ ಶ್ರೀಲಂಕಾ ಪ್ರವಾಸದ ಸಮಯದಲ್ಲಿ, ಅವರು ರಿಷಭ್ ಪಂತ್‌ಗೆ ಆಫ್-ಸ್ಪಿನ್ ಮತ್ತು ಸೂರ್ಯಕುಮಾರ್ ಯಾದವ್‌ಗೆ ಎಡಗೈ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಕಾಡಿದ್ದರು.
ಯಾರು ಈ ಕಮಿಂದು ಮೆಂಡಿಸ್?
ಸೆಪ್ಟೆಂಬರ್ 30, 1998 ರಂದು ಗಾಲೆಯಲ್ಲಿ ಜನಿಸಿದ ಕಮಿಂದು ಮೆಂಡಿಸ್ ಜುಲೈ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ತವರು ಮೈದಾನದಲ್ಲಿ ಶ್ರೀಲಂಕಾ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿಯೇ ಅವರು 61 ರನ್ ಗಳಿಸಿದರು. ಶ್ರೀಲಂಕಾ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 39 ರನ್‌ಗಳಿಂದ ಗೆದ್ದಿತು.
ಈ ರೀತಿ ಎರಡೂ ಕೈಗಳಿಂದ ಬೌಲಿಂಗ್ ಮಾಡುವ ಬೌಲರ್ ಗಳು ಕೇವಲ 5 ಮಂದಿ ಮಾತ್ರ. ಇದರಲ್ಲಿ ಪ್ರಸ್ತುತ ಕ್ರಿಕೆಟ್ ಆಡುತ್ತಿರುವುದು ಕಮಿಂದು ಮೆಂಡಿಸ್ ಒಬ್ಬರೇ. ಉಳಿದಂತೆ ಅಕ್ಷಯ್ ಕರ್ನೆವಾರ್, ಹನೀಫ್ ಮೊಹಮ್ಮದ್, ಗ್ರಹಾಂ ಗೂಚ್, ಹಶನ್ ತಿಲಕರತ್ನೆ ಈ ರೀತಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು.












Click it and Unblock the Notifications