WI vs AUS: ಶೇನ್ ವ್ಯಾಟ್ಸನ್ ಶತಕ ವ್ಯರ್ಥ! 217 ರನ್ ಚೇಸ್ ಮಾಡಿ ಗೆದ್ದ ವೆಸ್ಟ್ ಇಂಡೀಸ್
ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡಮಿ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ ವೆಸ್ಟ್ ಇಂಡೀಸ್ ಮಾಸ್ಟರ್ಸ್ ಭರ್ಜರಿ ಗೆಲುವು ಸಾಧಿಸಿದೆ. ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್‌ರಂತಹ ದಿಗ್ಗಜ ಆಟಗಾರರು ಮತ್ತೆ ಮೈದನಾಕ್ಕೆ ಇಳಿದಿದ್ದು ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅಬ್ಬರಿಸಿದರು. 52 ಎಸೆತಗಳಲ್ಲಿ 9 ಬೌಂಡರಿ 9 ಭರ್ಜರಿ ಸಿಕ್ಸರ್ ಸಹಿತ 107 ರನ್ ಗಳಿಸಿದರು. ಡೇನಿಯಲ್ ಕ್ರಿಸ್ಟಿಯನ್ 15 ಎಸೆತಗಳಲ್ಲಿ 32 ರನ್ ಗಳಿಸಿದರು. ಆಶ್ಲೆ ನರ್ಸ್ 3 ವಿಕೆಟ್ ಪಡೆದರೆ, ರವಿ ರಾಂಪಾಲ್, ಜೆರೋಮ್ ಟೇಲರ್ ತಲಾ 2 ವಿಕೆಟ್ ಪಡೆದರು. ಡ್ವಾನೆ ಸ್ಮಿತ್ 1 ವಿಕೆಟ್ ಪಡೆದುಕೊಂಡರು.

ವೆಸ್ಟ್ ಇಂಡೀಸ್ ಭರ್ಜರಿ ಬ್ಯಾಟಿಂಗ್
217 ರನ್‌ಗಳ ಬೃಹತ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಸ್ಫೋಟಕ ಆರಂಭ ಪಡೆಯಿತು. ಡ್ವಾನೆ ಸ್ಮಿತ್ 29 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್ ಸಹಿತ 51 ರನ್ ಗಳಿಸಿದರು. ಕ್ರಿಸ್ ಗೇಲ್ 11 ರನ್ ಗಳಿಸಿ ಔಟಾದರು. ಲೆಂಡಲ್ ಸಿಮನ್ಸ್ 44 ಎಸೆತಗಳಲ್ಲಿ 6 ಬೌಂಡರಿ 8 ಭರ್ಜರಿ ಸಿಕ್ಸರ್ ಸಹಿತ ಅಜೇಯ 94 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಬ್ರಿಯಾನ್ ಲಾರಾ 21 ಎಸೆತಗಳಲ್ಲಿ 33 ರನ್ ಗಳಿಸಿದರೆ, ಚಾಡ್ವಿಕ್ ವಾಲ್ಟನ್ 11 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿದರು.
ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಭಾರತ ಮಾಸ್ಟರ್ಸ್ ತಂಡವು ಶ್ರೀಲಂಕಾ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. ಮಂಗಳವಾರ ಇಂಡಿಯಾ ಮಾಸ್ಟರ್ಸ್ ಇಂಗ್ಲೆಂಡ್ ಮಾಸ್ಟರ್ಸ್ ವಿರುದ್ಧ ಸೆಣೆಸಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಆಟಗಾರರು ಮತ್ತೊಮ್ಮೆ ಕಣಕ್ಕಿಳಿದಿದ್ದು ಅಭಿಮಾನಿಗಳು ಮತ್ತೊಮ್ಮೆ ದಿಗ್ಗಜ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.












Click it and Unblock the Notifications