Virat Kohli: ಆರ್‌ಸಿಬಿ ಮಾಜಿ ಕೋಚ್ ಮಾರ್ಗದರ್ಶನದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಭ್ಯಾಸ
ಕಳಪೆ ಫಾರ್ಮ್‌ನಿಂದಾಗಿ ವ್ಯಾಪಕ ಟೀಕೆಗೆ ಗುರಿಯಾಗಿರುವ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಲು ದೇಶೀಯ ಕ್ರಿಕೆಟ್ ಆಡಲು ಸಜ್ಜಾಗುತ್ತಿದ್ದಾರೆ. 12 ವರ್ಷದ ಬಳಿಕ ಅವರು ಮತ್ತೆ ದೆಹಲಿ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ, ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅಭಿಮಾನಿಗಳು ಮತ್ತೊಮ್ಮೆ ವಿರಾಟ್ ಕೊಹ್ಲಿಯನ್ನು ಕಣ್ತುಂಬಿಕೊಳ್ಳಬಹುದು.
ಜನವರಿ 30 ರಿಂದ ಪ್ರಾರಂಭವಾಗಲಿರುವ ರಣಜಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುವುದು ಖಚಿತವಾಗಿದ್ದು ಅದಕ್ಕಾಗಿ ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ದೆಹಲಿ ತಂಡವು ರೈಲ್ವೇಸ್ ವಿರುದ್ಧ ಸೆಣೆಸಲಿದ್ದು, ದೆಹಲಿ ಪರವಾಗಿ ಕೊಹ್ಲಿ ಮಾತ್ರವಲ್ಲದೆ ರಿಷಬ್ ಪಂತ್ ಕೂಡ ಕಣಕ್ಕಿಳಿಯುವುದು ವಿಶೇಷವಾಗಿದೆ.

ಮುಂಬೈನಲ್ಲಿರುವ ವಿರಾಟ್ ಕೊಹ್ಲಿ ಈಗಾಗಲೇ ಬ್ಯಾಟಿಂಗ್ ಅಭ್ಯಾಸ ಪ್ರಾರಂಭಿಸಿದ್ದಾರೆ. ಭಾರತದ ಮಾಜಿ ಬ್ಯಾಟರ್, ಆರ್ ಸಿಬಿ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ಮಾರ್ಗದರ್ಶನದಲ್ಲಿ ವಿರಾಟ್ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ವಿಡಿಯೋ ವೈರಲ್
ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಸಂಜಯ್ ಬಂಗಾರ್ ಅವರ ಜೊತೆ ಚರ್ಚೆ ನಡೆಸುತ್ತಿರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದಾಗಿದೆ. ರಿಷಭ್ ಪಂತ್ ಕೂಡ ಅಭ್ಯಾಸದಲ್ಲಿ ಭಾಗವಹಿಸಿದ್ದು ಸಂಜಯ್ ಬಂಗಾರ್ ಥ್ರೋ ಡೌನ್ ನೀಡುತ್ತಿದ್ದರು.
ಫಾರ್ಮ್‌ಗೆ ಮರಳುವ ವಿಶ್ವಾಸ
ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತದ ಆಟಗಾರರು ಸತತವಾಗಿ ವೈಫಲ್ಯ ಕಂಡಿದ್ದು ಬಿಸಿಸಿಐ ಸಿಟ್ಟಿಗೆ ಕಾರಣವಾಗಿತ್ತು. ತಂಡದಲ್ಲಿ ಶಿಸ್ತು ಹೆಚ್ಚಿಸಲು ಬಿಸಿಸಿಐ ಹೊಸ ಷರತ್ತುಗಳನ್ನು ವಿಧಿಸಿದೆ. ವಿದೇಶಿ ಪ್ರವಾಸದಲ್ಲಿ ಆಟಗಾರರ ಕುಟುಂಬಸ್ಥರು ಭಾಗವಹಿಸುವಿಕೆ, ಆಟಗಾರರು ಕೊಂಡೊಯ್ಯಬೇಕಾದ ಲಗೇಜ್ ಬಗ್ಗೆ ಹೊಸ ನಿಯಮ ಜಾರಿ ಮಾಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಸ್ಟಾರ್ ಆಟಗಾರರು ಕೂಡ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ತಾಕೀತು ಮಾಡಿದೆ. ರಣಜಿ ಟ್ರೋಫಿಯಲ್ಲಿ ಆಡಿದರೆ ಮಾತ್ರ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಎಂದು ಬಿಸಿಸಿಐ ಹೇಳಿದೆ.
ಬಿಸಿಸಿಐ ಸೂಚನೆ ಬೆನ್ನಲ್ಲೇ ರೋಹಿತ್ ಶರ್ಮಾ, ರಿಷಬ್ ಪಂತ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ರಣಜಿ ಟ್ರೋಫಿಯಲ್ಲಿ ಆಡಿದ್ದಾರೆ. ಶುಭಮನ್ ಗಿಲ್ ಮಾತ್ರ ಶತಕ ಬಾರಿಸಿದ್ದರೆ ಉಳಿದ ಆಟಗಾರರು ರಣಜಿಯಲ್ಲೂ ವೈಫಲ್ಯ ಮುಂದುವರೆಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೂಡ ರಣಜಿ ಪಂದ್ಯ ಆಡಲು ಸಜ್ಜಾಗಿದ್ದು ಫಾರ್ಮ್‌ಗೆ ಮರಳುತ್ತಾರಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ವಿರಾಟ್ ಕೊಹ್ಲಿ 10 ಇನ್ನಿಂಗ್ಸ್‌ಗಳಲ್ಲಿ ಕೇವಲ 190 ರನ್ ಮಾತ್ರ ಗಳಿಸಿದ್ದರು. 2024ರಲ್ಲಿ 23 ಪಂದ್ಯಗಳು ಮತ್ತು 32 ಇನ್ನಿಂಗ್ಸ್‌ಗಳಲ್ಲಿ ಕೇವಲ 655 ರನ್ ಮಾತ್ರ ಗಳಿಸಿದ್ದಾರೆ. 2020ರ ಬಳಿಕ ಕೊಹ್ಲಿ ಸ್ಥಿರವಾಗಿ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ.












Click it and Unblock the Notifications