Virat Kohli: ವಿರಾಟ್, ರೋಹಿತ್ ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಗ್ಗೆ ಮೌನ ಮುರಿದ ಗೌತಮ್ ಗಂಭೀರ್
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮಹತ್ವದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವ ಮುನ್ನವೇ ಭಾರತದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಿಸಿಸಿಐ ಒತ್ತಡದಿಂದಲೇ ಇಬ್ಬರು ಅನಿವಾರ್ಯವಾಗಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ, ಇಂತಹ ಹಿರಿಯ ಆಟಗಾರರಿಗೆ ವಿದಾಯ ಪಂದ್ಯ ಆಡಲು ಕೂಡ ಅವಕಾಶ ನೀಡದೇ ಇರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ನಿವೃತ್ತಿ ಹಿಂದೆ ಕೋಚ್ ಗೌತಮ್ ಗಂಭೀರ್ ಅವರ ಪ್ರಭಾವ ಇದೆ ಎನ್ನುವ ಆರೋಪ ಕೂಡ ಇದೆ. ಗಂಭೀರ್ ತಾವು ಹೇಳಿದಂತೆ ಕೇಳುವ ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡಿದ್ದು, ಸ್ಟಾರ್ ಆಟಗಾರರನ್ನು ತಂಡದಿಂದ ದೂರವಿಡುತ್ತಿದ್ದಾರೆ ಎಂದು ಕೆಲವು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಅನುಭವಿ ಆಟಗಾರರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕಾರಣ, ಯುವ ಆಟಗಾರರಿಗೆ ಅವಕಾಶ ಸಿಗಲಿದೆ. ಇದೇ ಮೊದಲ ಬಾರಿಗೆ ರೋಹಿತ್, ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡಿರುವ ಭಾರತ ತಂಡದ ಮುಖ್ಯಕೋಚ್ ಗೌತಮ್ ಗಂಭೀರ್, ತಂಡದಲ್ಲಿ ಅವರಿಬ್ಬರಿಗೆ ಬದಲಿ ಆಟಗಾರರನ್ನು ಹುಡುಕುವುದು ಕಠಿಣ ಕೆಲಸ ಎಂದು ಒಪ್ಪಿಕೊಂಡಿದ್ದಾರೆ.
ಯುವ ಆಟಗಾರರ ಮೇಲೆ ವಿಶ್ವಾಸ
ಕ್ರಿಕೆಟ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, "ನಾವು ಇಬ್ಬರು ಹಿರಿಯ ಆಟಗಾರರಿಲ್ಲದೇ ಟೆಸ್ಟ್ ಕ್ರಿಕೆಟ್ ಆಡಬೇಕಾಗುತ್ತದೆ. ಇದು ಹಲವು ಯುವ ಆಟಗಾರರಿಗೆ ಸಿಕ್ಕಿರುವ ಉತ್ತಮ ಅವಕಾಶ ಎಂದು ನಾನು ನಂಬುತ್ತೇನೆ. ಇದು ಕಠಿಣ ಕೆಲಸ ಹೌದು, ಆದರೆ ಯುವ ಆಟಗಾರರು ಸವಾಲನ್ನು ಸ್ವೀಕರಿಸಲು ಮುಂದೆ ಬರುತ್ತಾರೆ" ಎಂದು ಹೇಳಿದ್ದಾರೆ.
ಬುಮ್ರಾ ಉದಾಹರಣೆ ಕೊಟ್ಟ ಗಂಭೀರ್
ಇತ್ತೀಚೆಗೆ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಗ್ಗೆ ಪ್ರಸ್ತಾಪಿಸಿದ ಗೌತಮ್ ಗಂಭೀರ್, ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರು ಇಲ್ಲದೇ ಇದ್ದರೂ ತಂಡವು ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿತ್ತು.
"ಜಸ್ಪ್ರಿತ್ ಬುಮ್ರಾ ಇಲ್ಲದಿದ್ದಾಗ, ನಾನು ನಿಖರವಾಗಿ ಅದನ್ನೇ ಹೇಳಿದೆ: ಯಾರಾದರೂ ತಪ್ಪಿಸಿಕೊಂಡರೆ ದೇಶಕ್ಕಾಗಿ ವಿಶೇಷವಾದದ್ದನ್ನು ಮಾಡಲು ಇನ್ನೊಬ್ಬ ಆಟಗಾರನಿಗೆ ಅವಕಾಶ ನೀಡಬಹುದು. ಆ ಅವಕಾಶಕ್ಕಾಗಿ ಕಾಯುತ್ತಿರುವ ಇತರ ವ್ಯಕ್ತಿಗಳು ಇರುತ್ತಾರೆ ಎಂದು ಆಶಿಸುತ್ತೇನೆ" ಎಂದು ಅವರು ಹೇಳಿದ್ದಾರೆ
ರೋಹಿತ್ ಮತ್ತು ವಿರಾಟ್ ಅವರ ಟೆಸ್ಟ್ ಕ್ರಿಕೆಟ್ ತ್ಯಜಿಸುವ ನಿರ್ಧಾರದ ಬಗ್ಗೆ ಕೇಳಿದಾಗ, ಗಂಭೀರ್ ನಿವೃತ್ತಿ ವೈಯಕ್ತಿಕ ನಿರ್ಧಾರ, ತಂಡದ ನಿರ್ವಹಣೆ ಅಥವಾ ಆಯ್ಕೆ ಸಮಿತಿಯಲ್ಲಿ ಯಾರಿಗೂ ಆಟಗಾರನ ಮೇಲೆ ಒತ್ತಡ ಹೇರುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೀವು ಆಟವನ್ನು ಪ್ರಾರಂಭಿಸಿದಾಗ ಮತ್ತು ನೀವು ಮುಗಿಸಲು ಬಯಸಿದಾಗ, ಅದು ತುಂಬಾ ವೈಯಕ್ತಿಕ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ನಿವೃತ್ತಿ ಘೋಷಿಸಿ ಎಂದು ಹೇಳಲು ಯಾರಿಗೂ ಹಕ್ಕಿಲ್ಲ ಎಂದು ಗಂಭೀರ್ ಹೇಳಿದರು.
"ಕೋಚ್ ಆಗಿರಲಿ, ಆಯ್ಕೆದಾರರಾಗಿರಲಿ, ಈ ದೇಶದ ಯಾರೇ ಆಗಿರಲಿ, ಯಾವಾಗ ನಿವೃತ್ತಿ ಹೊಂದಬೇಕು ಮತ್ತು ಯಾವಾಗ ನಿವೃತ್ತಿ ಹೊಂದಬಾರದು ಎಂದು ಹೇಳುವ ಹಕ್ಕು ಅವರಿಗಿದೆ. ಆದ್ದರಿಂದ ಅದು ಒಳಗಿನಿಂದ ಬರುತ್ತದೆ" ಎಂದಿದ್ದಾರೆ.












Click it and Unblock the Notifications