Virat Kohli: ಸಚಿನ್ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ
ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ತಂಡ ಹಲವು ದಾಖಲೆಗಳನ್ನು ನಿರ್ಮಿಸಿದೆ. ಮೊದಲ ಟೆಸ್ಟ್‌ನಲ್ಲಿ ದೊಡ್ಡ ಮೊತ್ತದ ರನ್ ಗಳಿಸಲು ವಿಫಲವಾಗಿದ್ದ ವಿರಾಟ್ ಕೊಹ್ಲಿ, ಎರಡನೇ ಟೆಸ್ಟ್‌ನಲ್ಲಿ ಉಪಯುಕ್ತ ರನ್ ಗಳಿಸುವ ಮೂಲಕ ಹೊಸ ದಾಖಲೆ ಬರೆದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 27,000 ರನ್ ಪೂರೈಸಿದ ವಿಶ್ವದ ನಾಲ್ಕನೇ ಕ್ರಿಕೆಟಿಗ ಎನ್ನುವ ದಾಖಲೆ ಬರೆದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡರು, ವೇಗವಾಗಿ 27,000 ರನ್ ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಭಾಜನರಾದರು. ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಪೂರೈಸಲು 623 ಇನ್ನಿಂಗ್ಸ್ ತೆಗೆದುಕೊಂಡರೆ, ವಿರಾಟ್ ಕೊಹ್ಲಿ 594 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಹೊರತಪಡಿಸಿದರೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ಸಚಿನ್ ತೆಂಡೂಲ್ಕರ್ 2007ರಲ್ಲಿ 623 ಇನ್ನಿಂಗ್ಸ್‌ಗಳಲ್ಲಿ 27,000 ರನ್ ಗಳಿಸಿ ದಾಕಲೆ ಬರೆದಿದ್ದರು. 2015ರಲ್ಲಿ ಕುಮಾರ್ ಸಂಗಕ್ಕಾರ 648ನೇ ಇನ್ನಿಂಗ್ಸ್‌ನಲ್ಲಿ 27,000 ರನ್ ಪೂರೈಸಿದ್ದರು. ರಿಕಿ ಪಾಂಟಿಂಗ್ 650 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 27,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
2023ರ ಫೆಬ್ರವರಿಯಲ್ಲಿ 549 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 25,000 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಸಚಿನ್ ದಾಖಲೆಯನ್ನು ಮುರಿದಿದ್ರು, ಅಕ್ಟೋಬರ್ 2023ರಲ್ಲಿ ಮತ್ತೆ ಸಚಿನ್ ದಾಖಲೆ ಮುರಿದಿದ್ದ ಕೊಹ್ಲಿ ವೇಗವಾಗಿ 26,000 ರನ್ ಗಳಿಸಿದ ಸಾಧನೆ ಮಾಡಿದ್ದರು.
47 ರನ್ ಗಳಿಸಿದ ವಿರಾಟ್ ಕೊಹ್ಲಿ
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಮೂರು ದಿನಗಳ ಆಟಕ್ಕೆ ಮಳೆ ಅಡ್ಡಿಯಾದ ಬಳಿಕ, ನಾಲ್ಕನೇ ದಿನದಾಟ ವೀಕ್ಷಕರಿಗೆ ಥ್ರಿಲ್ ಕೊಟ್ಟಿದೆ. ಶತಾಯ ಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಟೀಂ ಇಂಡಿಯಾ, ಟಿ20 ಮಾದರಿಯಲ್ಲಿ ಬ್ಯಾಟ್ ಬೀಸುತ್ತಿದ್ದು, ಹೊಸ ದಾಖಲೆಗಳನ್ನು ಬರೆದಿದೆ.
ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ಸಹಿತ 37 ರನ್ ಗಳಿಸುವ ಮೂಲಕ ಮಿಂಚಿದರು. ಅರ್ಧಶತಕದ ಸನಿಹದಲ್ಲಿದ್ದಾಗಲೇ ಶಕೀಬ್ ಅಲ್ ಹಸನ್‌ರ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.
ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ 233 ರನ್‌ಗಳಿಗೆ ಆಲೌಟ್ ಆಯಿತು. ಮೊಮಿನುಲ್ ಇಸ್ಲಾಂ 107 ರನ್ ಗಳಿಸುವ ಮೂಲಕ ಬಾಂಗ್ಲಾದೇಶ ತಂಡಕ್ಕೆ ಆಸರೆಯಾದರು. ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಸಿರಾಜ್, ಅಶ್ವಿನ್, ಆಕಾಶ್ ದೀಪ್ ತಲಾ 2 ವಿಕೆಟ್ ಪಡೆದರು.
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 285 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿದೆ. ಭಾರತ 52 ರನ್‌ಗಳ ಮುನ್ನಡೆ ಕಾಯ್ದುಕೊಂಡಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವ ಮೂಲಕ ಚೇಸ್ ಮಾಡಿ ಗೆಲ್ಲುವ ವಿಶ್ವಾಸದಲ್ಲಿದೆ.












Click it and Unblock the Notifications