KKR vs RCB: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೇಗಿದೆ ವಿರಾಟ್ ಕೊಹ್ಲಿ ರೆಕಾರ್ಡ್?
ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಇಂದು ಅಂಗಳ ಪ್ರವೇಶಿಸಲಿದ್ದಾರೆ. ಆರ್‌ಸಿಬಿ ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಗೆಲುವು ಸಾಧಿಸುವ ಅನಿವಾರ್ಯತೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನು ಎಲ್ಲ ಪಂದ್ಯವೂ ಫೈನಲ್ ರೀತಿ ಗೋಚರವಾಗುತ್ತಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಿರಾಟ್ ಕೊಹ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಅಪ್‌ಡೇಟ್ ವರ್ಷನ್‌ನಲ್ಲಿ ಕಾಣಿಸಿಕೊಂಡಿರುವ ವಿರಾಟ್ ಎದುರಾಳಿಗಳ ಬೌಲರ್‌ಗಳನ್ನು ಕಾಡುತ್ತಿದ್ದಾರೆ. 17ನೇ ಆವೃತ್ತಿಯ ಐಪಿಎಲ್‌ನ 36 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಎದುರಿಸಲಿದೆ.

ಭಾನುವಾರ ನಡೆಯುವ ಪಂದ್ಯ ಕೆಕೆಆರ್ ತವರು ಮೈದಾನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ, ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿಯ ಮೇಲೆ ನೆಟ್ಟಿವೆ. ಏಕೆಂದರೆ KKR ವಿರುದ್ಧ ಅವರ ಪ್ರದರ್ಶನವು ಪ್ರಬಲವಾಗಿದೆ ಮತ್ತು ಅವರು ಮತ್ತೆ ದೊಡ್ಡ ಇನ್ನಿಂಗ್ಸ್ ಆಡಲು ಎದುರು ನೋಡುತ್ತಿದ್ದಾರೆ. ಅಲ್ಲದೆ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಕೆಕೆಆರ್ ವಿರುದ್ಧ ವಿರಾಟ್ ಸಾಧನೆ
ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ತಂಡದ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ, ಅಬ್ಬರಿಸಿದ್ದಾರೆ. ಕೆಕೆಆರ್ ವಿರುದ್ಧ ಸಾವಿರ ರನ್ ಸಿಡಿಸುವ ಅವಕಾಶದ ಸನಿಹದಲ್ಲಿದ್ದಾರೆ. ಅವರು ಕೆಕೆಆರ್ ತಂಡದ ವಿರುದ್ಧ 33 ಪಂದ್ಯಗಳಲ್ಲಿ 39.33 ಸರಾಸರಿ ಮತ್ತು 130.93 ಸ್ಟ್ರೈಕ್ ರೇಟ್‌ನಲ್ಲಿ 944 ರನ್ ಗಳಿಸಿದ್ದಾರೆ. ಈ ಅಮೋಘ ಅಂಕಿ ಅಂಶಗಳಲ್ಲಿ ಒಂದು ಶತಕ ಹಾಗೂ ಆರು ಅರ್ಧಶತಕ ಬಾರಿಸಿದ್ದು, 6 ಬಾರಿ ಅಜೇಯರಾಗಿ ಉಳಿದ ಸಾಧನೆಯನ್ನು ಮಾಡಿದ್ದಾರೆ.
ಬೌಲರ್ vs ವಿರಾಟ್
ಕೆಕೆಆರ್ ತಂಡದ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ಹಾಗೂ ವಿರಾಟ್ ಕೊಹ್ಲಿ ಕೇವಲ ಒಂದು ಬಾರಿ ಮಾತ್ರ ಮುಖಾಮುಖಿ ಆಗಿದ್ದು, ಈ ವೇಳೆ 17 ರನ್ ಸಿಡಿಸಿದ್ದಾರೆ. ಅಲ್ಲದೆ ವಿಕೆಟ್ ನೀಡದಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆಂಡ್ರೆ ರಸೆಲ್ ವಿರುದ್ಧ, ಅವರು 11 ಇನ್ನಿಂಗ್ಸ್‌ಗಳ 66 ಎಸೆತಗಳಲ್ಲಿ 88 ರನ್ ಗಳಿಸಿದ್ದಾರೆ ಮತ್ತು ಎರಡು ಬಾರಿ ಔಟಾಗಿದ್ದಾರೆ. ಸುನಿಲ್ ನರೈನ್ ವಿರುದ್ಧ 16 ಇನ್ನಿಂಗ್ಸ್‌ಗಳಲ್ಲಿ 118 ಎಸೆತಗಳನ್ನು ಎದುರಿಸಿ 127 ರನ್ ಗಳಿಸಿ 4 ಬಾರಿ ವಿಕೆಟ್ ಒಪ್ಪಿಸಿದ್ದಾರೆ.

ಒಟ್ಟಾರೆ ಐಪಿಎಲ್‌ನಲ್ಲಿ ವಿರಾಟ್ ಸಾಧನೆ
ಕೆಕೆಆರ್ ವಿರುದ್ಧ 2008ರಲ್ಲಿ ವಿರಾಟ್ ಕೊಹ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. 17 ಆವೃತ್ತಿಗಳಲ್ಲಿ ಬ್ಯಾಟ್ ಮಾಡಿರುವ ವಿರಾಟ್ ಒಟ್ಟು 244 ಪಂದ್ಯಗಳ 236 ಇನ್ನಿಂಗ್ಸ್‌ಗಳಲ್ಲಿ 38.12 ಸರಾಸರಿ ಮತ್ತು 130.75 ಸ್ಟ್ರೈಕ್ ರೇಟ್‌ನೊಂದಿಗೆ 7,624 ರನ್ ಗಳಿಸಿದ್ದಾರೆ.
ಇದರಲ್ಲಿ 8 ಶತಕ ಮತ್ತು 52 ಅರ್ಧ ಶತಕಗಳು ಸೇರಿವೆ. ಅಲ್ಲದೆ 36 ಬಾರಿ ಅಜೇಯರಾಗಿ ಉಳಿದಿದ್ದಾರೆ. ಅವರು 144 ಐಪಿಎಲ್ ಪಂದ್ಯಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದು, 68 ಪಂದ್ಯದಲ್ಲಿ ತಂಡಕ್ಕೆ ಜಯದ ಮಾಲೆ ತೊಡಿಸಿದ್ದಾರೆ.












Click it and Unblock the Notifications