Vinesh Phogat: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ವಿನೇಶ್ ಫೋಗಟ್; ಭಾರತಕ್ಕೆ ಮತ್ತೊಂದು ಪದಕದ ಭರವಸೆ
ಹೆಮ್ಮೆಯ ಕುಸ್ತಿಪಟು ವಿನೇಶ್ ಫೋಗಟ್ ಒಲಿಂಪಿಕ್ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿ ವಿರುದ್ಧ ಅದ್ಭುತ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್, ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರನ್ನು 7-5 ಅಂಕಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಸೆಮಿಫೈನಲ್‌ನಲ್ಲಿ ಅವರು ಗೆದ್ದರೆ ಭಾರತಕ್ಕೆ ಪದಕ ಖಚಿತವಾಗಲಿದೆ.
2018 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಮತ್ತು ಯೂರೋಪಿಯನ್ ಚಾಂಪಿಯನ್ ಆಗಿರುವ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರು ಕಠಿಣ ಪ್ರತಿಸ್ಪರ್ಧಿಯಾಗಿದ್ದರು, ಆದರೆ ಕೊನೆಯ ಪಂದ್ಯದಲ್ಲಿ ಜಪಾನ್‌ನ ವಿಶ್ವ ಚಾಂಪಿಯನ್ ಕುಸ್ತಿಪಟುವನ್ನೇ ಮಣಿಸಿದ್ದ ವಿನೇಶ್ ಫೋಗಟ್ ಅವರ ಆತ್ಮವಿಶ್ವಾಸದ ಮುಂದೆ ಉಕ್ರೇನ್ ಕುಸ್ತಿಪಟುವಿನ ಆಟ ಮಂಕಾಯಿತು.

ಆರು ನಿಮಿಷಗಳ ರಣ ರೋಚಕ ಹೋರಾಟದಲ್ಲಿ ವಿನೇಶ್ ಫೋಗಟ್ ಮೊದಲಿನಿಂದಲೇ ಪ್ರಾಬಲ್ಯ ಸಾಧಿಸಿದರು. ಯಾವ ಹಂತದಲ್ಲೂ ಎದುರಾಳಿಗೆ ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ. ಕೊನೆಯ ಕ್ಷಣದಲ್ಲಿ ಒಕ್ಸಾನಾ ಲಿವಾಚ್ ಆಕ್ರಮಣಕಾರಿಯಾಗಿ ಆಡಿದರೂ, ಅವರನ್ನು ಹಿಮ್ಮೆಟ್ಟಿಸುವಲ್ಲಿ ವಿನೇಶ್ ಫೋಗಟ್ ಯಶಸ್ವಿಯಾದರು. ವಿನೇಶ್ ಒಂದು ಹಂತದಲ್ಲಿ 4-0 ಮುನ್ನಡೆ ಸಾಧಿಸಿದರು, ಆದರೆ ಕೊನೆಯಲ್ಲಿ ಲಿವಾಚ್ ಕೂಡ ಆಕ್ರಮಣಕಾರಿ ಆಟ ಆಡಿದರು ಅವರು 5 ಅಂಕ ಗಳಿಸುವ ವೇಳೆಗೆ ವಿನೇಶ್ 7 ಅಂಕ ಗಳಿಸಿದ್ದರು.
ಇನ್ನೊಂದು ಪಂದ್ಯ ಗೆದ್ದರೆ!
ವಿನೇಶ್ ಫೋಗಟ್ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಸೆಮಿಫೈನಲ್ ಪಂದ್ಯ ಇಂದು ರಾತ್ರಿ 10.15 ಕ್ಕೆ ನಡೆಯಲಿದ್ದು, ಸೆಮಿಫೈನಲ್‌ನಲ್ಲಿ ವಿನೇಶ್ ಗೆದ್ದರೆ ಪದಕ ಗೆಲ್ಲುವುದು ಖಚಿತವಾಗಲಿದೆ. ಫೈನಲ್‌ನಲ್ಲಿ ಅವರು ಸೋತರೂ ಬೆಳ್ಳಿ ಪದಕ ಗೆಲ್ಲಲ್ಲಿದ್ದಾರೆ.
ವಿಶ್ವ ಚಾಂಪಿಯನ್ ಅನ್ನೆ ಬಗ್ಗು ಬಡಿದಿರುವ ವಿನೇಶ್ ಫೋಗಟ್ ಅವರು ಈಗ ಒಲಿಂಪಿಕ್ ಪದಕ ಗೆಲ್ಲುವ ಫೇವರಿಟ್ ಕ್ರೀಡಾಪಟುವಾಗಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಕೂಡ ಫೋಗಟ್ ಅವರು ಪದಕ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ.












Click it and Unblock the Notifications