Vaibhav Sooryavanshi: ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಂದ್ರೆ ಏನೋ ಒಂಥರಾ.. ಕಿಕ್: ಧ್ರುವ್ ಜುರೆಲ್
Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ನಿಂದಲೇ ಹೆಸರಾಗಿದ್ದಾರೆ. ಇದೀಗ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ಧ್ರುವ್ ಜುರೆಲ್ ಅವರು ತಮ್ಮ ಸಹ ಆಟಗಾರ ವೈಭವ್ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ಅವರೊಂದಿಗೆ ಆಡುವ ಕುರಿತು ಕೇಳಿದಾಗ, ಭಾರತದ ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಅತ್ಯಂತ ಪ್ರಾಮಾಣಿಕ ಉತ್ತರ ನೀಡಿದ್ದಾರೆ. ಜುರೆಲ್ ಅವರು ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಇದೇ ತಂಡಕ್ಕೆ 15 ವರ್ಷದ ಯುವ ಆಟಗಾರ ಸೂರ್ಯವಂಶಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಾರೆ.

ವೈಭವ್ ಬಗ್ಗೆ ಧ್ರುವ್ ಜುರೆಲ್ ಮೆಚ್ಚುಗೆ
ವೈಭವ್ ಸೂರ್ಯವಂಶಿಯನ್ನ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ₹1.1 ಕೋಟಿ ಭಾರಿ ಮೊತ್ತ ನೀಡಿ ಖರೀದಿಸಿದಾಗಿನಿಂದಲೂ ಅವರು ಸುದ್ದಿಯಲ್ಲಿದ್ದಾರೆ. ಇದೀಗ ಇದೇ ತಂಡದ ಸಹ ಹಿರಿಯ ಆಟಗಾರ ಧ್ರುವ್ ಜುರೆಲ್ ಅವರು ಈ ಯುವ ಪ್ರತಿಭೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಗಮನ ಸೆಳೆದಿದ್ದಾರೆ.
ಫ್ರಾಂಚೈಸಿ ನಂಬಿಕೆ ಉಳಿಸಿಕೊಂಡ 'ವಂಡರ್ ಕಿಡ್'
'ವಂಡರ್ ಕಿಡ್' ಟಿ20 ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಫ್ರಾಂಚೈಸಿ ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು. ಈ ನಡುವೆ ಅವರು ಭಾರತ ಅಂಡರ್-19 ಮತ್ತು ಭಾರತ 'ಎ' ತಂಡಗಳ ಪರವಾಗಿಯೂ ಅತ್ಯುತ್ತಮವಾಗಿ ಆಡಿ, ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ವೈಭವ್ ಬಗ್ಗೆ ಧ್ರುವ್ ಜುರೆಲ್ ಹೇಳಿದ್ದೇನು?
ಐಪಿಎಲ್ನ ಆರ್ಆರ್ ತಂಡದ ವಿಕೆಟ್ ಕೀಪರ್-ಬ್ಯಾಟರ್, ವೈಭವ್ ಸೂರ್ಯವಂಶಿ ಅವರೊಂದಿಗೆ ಬ್ಯಾಟಿಂಗ್ ಮಾಡುವಾಗ ಎದುರಾಗುವ ಒತ್ತಡದ ಕುರಿತಾಗಿ ಮಾತನಾಡಿದ್ದಾರೆ. 'ಪವರ್ಪ್ಲೇನಲ್ಲಿ ಅವನು ಸಿಕ್ಸರ್-ಬೌಂಡರಿಗಳ ಸುರಿಮಳೆ ಸುರಿಸುತ್ತಾನೆ. ಅವನನ್ನು ನೋಡಿದಾಗ ನಮಗೂ ಅವಕಾಶ ಸಿಕ್ಕರೆ ತಕ್ಷಣವೇ ಬ್ಯಾಟ್ ಬೀಸಲು ಆರಂಭಿಸಬೇಕು ಎನಿಸುತ್ತದೆ. ಏಕೆಂದರೆ ಅವನು ಅಷ್ಟರ ಮಟ್ಟಿಗೆ ಎದುರಾಳಿ ಬೌಲರ್ಗಳನ್ನು ಯಾವುದೇ ಭಯವಿಲ್ಲದೆ ದಂಡಿಸುತ್ತಲಿರುತ್ತಾನೆ,' ಎಂದು ಜುರೆಲ್ ಹೇಳಿದ್ದಾರೆ.
ಜುಲೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20ಐ ಪ್ರವಾಸದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ವೈಭವ್ ಸೂರ್ಯವಂಶಿ, ಇತ್ತೀಚೆಗೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭಾರತ 3-0 ಅಂತರದಲ್ಲಿ ಗೆದ್ದ ಸರಣಿಯ ಭಾಗವಾಗಿದ್ದರು. ಆದರೆ ಈ ಪಂದ್ಯಾವಳಿಯಲ್ಲಿ ಆಡುವ ಅವಕಾಶ ಅವಕಾಶ ಅವರಿಗೆ ಸಿಗಲಿಲ್ಲ.
ಇಂಗ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಲ್ಲಿ ಈ ಯುವ ಪ್ರತಿಭೆ 14, 13 ಮತ್ತು 15 ರನ್ಗಳನ್ನು ಗಳಿಸಿದ್ದರು. ಆ ಬಳಿಕ ಜಿಂಬಾಬ್ವೆ ವಿರುದ್ಧ ಉತ್ತಮ ಪ್ರದರ್ಶನವನ್ನು ತೋರಿದ ಅವರು ಸರಣಿ ಶ್ರೇಷ್ಠ ಹಾಗೂ ಅಂತಿಮ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಎಡಗೈ ಬ್ಯಾಟರ್ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ನೆರವಿನಿಂದ ಒಟ್ಟು 151 ರನ್ ಕಲೆಹಾಕಿದರು.
ಆದರೆ ನಂತರದ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲಿ ಭಾರತವು ವೈಭವ್ ಸೂರ್ಯವಂಶಿ ಅವರನ್ನು ಬೆಂಚ್ನಲ್ಲಿ ಕಾಯಿಸಲು ನಿರ್ಧರಿಸಿ, ಅಭಿಷೇಕ್ ಶರ್ಮಾ ಅವರೊಂದಿಗೆ ಸಂಜು ಸ್ಯಾಮ್ಸನ್ ಅವರನ್ನೇ ಮತ್ತೆ ಆರಂಭಿಕರನ್ನಾಗಿ ಕಣಕ್ಕಿಳಿಸಿತು. ವೈಭವ್ 2026ರ ಏಷ್ಯನ್ ಗೇಮ್ಸ್ಗಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೂ ಸಹ ಸಂಜು ಅವರ ಉಪಸ್ಥಿತಿಯಿಂದಾಗಿ ಅವರು ಹೊರಗಡೆಯೇ ಕೂರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಹೇಳುವುದಾದರೆ, ವೈಭವ್ ಸೂರ್ಯವಂಶಿ ಬ್ಯಾಟಿಂಗ್ನಲ್ಲಿ ಏನೋ ಒಂಥಾ ಕಿಕ್ ಇದೆ ಎನ್ನುವ ರೀತಿಯಲ್ಲಿ ಜುರೆಲ್ ಹೇಳಿಕೆ ನೀಡಿದ್ದಾರೆ.


Click it and Unblock the Notifications
