Vaibhav Sooryavanshi: 2024, 2025, 2026.. ಕ್ರಿಕೆಟ್ ದಿಗ್ಗಜರನ್ನೇ ಬೆರಗುಗೊಳಿಸಿದ 15 ವರ್ಷದ ವೈಭವ್ ಸೂರ್ಯವಂಶಿ
Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ದಿಗ್ಗಜರ ಗಮನ ಸೆಳೆದಿದ್ದಾರೆ. ಇದೀಗ ಅವರು ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯ ತಂಡದ ಪರವೂ ಕೂಡ ಅಬ್ಬರಿಸುವ ಮೂಲಕ ತಮ್ಮ ಮೇಲಿನ ನಿರೀಕ್ಷೆಗಳನ್ನು ಎತ್ತಿಹಿಡಿದಿದ್ದಾರೆ. ಹಾಗಾದ್ರೆ ಒತ್ತಡದ ಪಂದ್ಯಗಳಲ್ಲಿ 'ವಂಡರ್ ಕಿಡ್' ಪ್ರದರ್ಶನ ಹೇಗಿತ್ತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯೋಣ ಬನ್ನಿ.
ಟೀಮ್ ಇಂಡಿಯಾ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಬೆಂಗಳೂರಿನಲ್ಲಿ ಸೆಂಟ್ರಲ್ ಝೋನ್ ವಿರುದ್ಧ ನಡೆದ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ಪರ ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಹಲವು ಕ್ರಿಕೆಟ್ ದಿಗ್ಗಜರು ಹಾಗೂ ಅಭಿಮಾನಿಗಳು ತಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಯಾವ್ಯಾವ ಪಂದ್ಯಗಳಲ್ಲಿ ಅವರ ಪ್ರದರ್ಶನ ಹೇಗಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಆಕ್ರಮಣಕಾರಿ ಆಟ ಆಡಿದ ವೈಭವ್
ನಾಯಕ ಇಶಾನ್ ಕಿಶನ್ ಅವರ ಗೈರುಹಾಜರಿ ವೇಳೆ ನಾಯಕತ್ವದ ಜವಾಬ್ದಾರಿಯನ್ನೂ ನಿಭಾಯಿಸಿದ್ದ ವೈಭವ್ ಸೂರ್ಯವಂಶಿ, ಈ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 92 ಮತ್ತು 40 ರನ್ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರ 40 ರನ್ಗಳ ಕಾಣಿಕೆಯು ಈಸ್ಟ್ ಜೋನ್ ತಂಡವು 159 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲು ಪ್ರಮುಖ ಪಾತ್ರ ವಹಿಸಿತು.
'ವಂಡರ್ ಕಿಡ್'ನಿಂದ ಅತ್ಯುತ್ತಮ ಪ್ರದರ್ಶನ
ಈಗಾಗಲೇ ವೈಭವ್ ಸೂರ್ಯವಂಶಿ ಅವರು ಭಾರತ ಯು-19, ಇಂಡಿಯಾ 'ಎ' ಹಾಗೂ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಟಿ-20 ಮತ್ತು 50 ಓವರ್ಗಳ ಫಾರ್ಮ್ಯಾಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ನಡೆಯುತ್ತಿರುವ ದುಲೀಪ್ ಟ್ರೋಫಿಯ ಟೆಸ್ಟ್ ಪಂದ್ಯದಲ್ಲೂ ಈಸ್ಟ್ ಜೋನ್ ತಂಡದ ಪರ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಪ್ರಮುಖ ಪಂದ್ಯಗಳಲ್ಲಿ ವೈಭವ್ ಸಿಡಿಸಿದ ರನ್ಗಳು
* 2024ರ ಎಸಿಸಿ ಅಂಡರ್ 19 ಏಷ್ಯಾ ಕಪ್ ಸೆಮಿಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ 67 ರನ್.
* 2024ರ ಎಸಿಸಿ ಅಂಡರ್ 19 ಏಷ್ಯಾ ಕಪ್ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ 9 ರನ್.
* 2025ರ ಎಸಿಸಿ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ 38 ರನ್.
* 2025ರ ಎಸಿಸಿ ಅಂಡರ್ 19 ಏಷ್ಯಾ ಕಪ್ ಸೆಮಿಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ 9 ರನ್.
* 2025ರ ಎಸಿಸಿ ಯು-19 ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ 26 ರನ್.
* 2026ರ ಐಸಿಸಿ ಯು-19 ವಿಶ್ವಕಪ್ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ 68 ರನ್.
* 2026ರ ಐಸಿಸಿ ಯು-19 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 175 ರನ್.
* 2026ರ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ 97 ರನ್.
* 2026ರ ಐಪಿಎಲ್ ಕ್ವಾಲಿಫಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 96 ರನ್.
* ದುಲೀಪ್ ಟ್ರೋಫಿ 2026 ಸೆಮಿಫೈನಲ್ನಲ್ಲಿ ಸೆಂಟ್ರಲ್ ಜೋನ್ ವಿರುದ್ಧ 92 ಮತ್ತು 40 ರನ್.
ದುಲೀಪ್ ಟ್ರೋಫಿಯಲ್ಲೂ ವೈಭವ್ ಮಿಂಚಿಂಗ್
ಇನ್ನೂ ಮಂಗಳವಾರ ನಡೆದ ದುಲೀಪ್ ಟ್ರೋಫಿ 2026 ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಈಸ್ಟ್ ಜೋನ್ ತಂಡವು ಸೆಂಟ್ರಲ್ ಜೋನ್ ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. 159 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಈಸ್ಟ್ ಜೋನ್ ತಂಡವು 39.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಗುರಿ ತಲುಪಿತು. ತಂಡದ ನಾಯಕ ಇಶಾನ್ ಕಿಶನ್ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿ ಅಜೇಯ 39 ರನ್ ಗಳಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರೆ, ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರು ಜಯದ ರನ್ ಬಾರಿಸಿ ಗಮನ ಸೆಳೆದರು.
ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿ
ಭಾರತೀಯ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡಲು ಆಯ್ಕೆಗಾರರ ಗಮನ ಸೆಳೆಯುತ್ತಿರುವ ಪ್ರಮುಖ ವೇಗಿ ಮೊಹಮ್ಮದ್ ಶಮಿ, ಈ ಪಂದ್ಯದಲ್ಲೂ ಅತ್ಯದ್ಭುತ ಪ್ರದರ್ಶನ ನೀಡಿ ಒಟ್ಟು 5 ವಿಕೆಟ್ ಕಬಳಿಸಿದರು. ಕಳೆದ ವರ್ಷ ಮಾರ್ಚ್ನಲ್ಲಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಶಮಿ ಭಾರತದ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.
ಇನ್ನೂ ತಮ್ಮ ಎರಡನೇ ಇನ್ನಿಂಗ್ಸ್ನಲ್ಲಿ ಸೆಂಟ್ರಲ್ ಜೋನ್ ತಂಡವು 158 ರನ್ಗಳಿಗೆ ಆಲೌಟ್ ಆಯಿತು. ಈಸ್ಟ್ ಜೋನ್ ಪರ ಮಿಂಚಿದ ಮುಕೇಶ್ ಕುಮಾರ್ 44 ರನ್ ನೀಡಿ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 56 ರನ್ಗಳಿಗೆ 3 ವಿಕೆಟ್ ಕಬಳಿಸಿದರು. ಈ ಜೋಡಿಯ ಮಾರಕ ಬೌಲಿಂಗ್ಗೆ ಧೂಳಿಪಟವಾದ ಸೆಂಟ್ರಲ್ ಜೋನ್, ಈಸ್ಟ್ ಜೋನ್ಗೆ 159 ರನ್ಗಳ ಸಾಧಾರಣ ಗುರಿ ನೀಡಲಷ್ಟೇ ಶಕ್ತವಾಯಿತು. ಸೆಂಟ್ರಲ್ ಜೋನ್ ಪರ ಎರಡನೇ ಇನ್ನಿಂಗ್ಸ್ನಲ್ಲಿ ಅಮನ್ ಮೊಖಾಡೆ (41), ಅರ್ಷದ್ ಖಾನ್ (25) ಮತ್ತು ಹರ್ಷ್ ದುಬೆ (24) ರನ್ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ನಲ್ಲಿ ರಿಂಕು ಸಿಂಗ್ ಅವರು ಸಿಡಿಸಿದ 60 ರನ್ಗಳ ನೆರವಿನಿಂದ ಸೆಂಟ್ರಲ್ ಜೋನ್ 266 ರನ್ ಕಲೆಹಾಕಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಬೀಸಿದ ಈಸ್ಟ್ ಜೋನ್ ಕೂಡ 266 ರನ್ ಗಳಿಸಿ ಸಮಬಲ ಸಾಧಿಸಿತು. ಈಸ್ಟ್ ಜೋನ್ ಪರ ಯುವ ಪ್ರತಿಭೆ ವೈಭವ್ ಸೂರ್ಯವಂಶಿ 92 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಹೊಸ ಇತಿಹಾಸ ಬರೆದ ವೈಭವ್ ಸೂರ್ಯವಂಶಿ
ಸೂರ್ಯವಂಶಿ ಅವರ ಈ ಇನ್ನಿಂಗ್ಸ್ ಕೇವಲ 81 ಎಸೆತಗಳಲ್ಲಿ ಮೂಡಿಬಂದಿದ್ದು, ಇದರಲ್ಲಿ 7 ಸಿಕ್ಸರ್ ಮತ್ತು 7 ಬೌಂಡರಿಗಳು ಸೇರಿದ್ದವು. ಜೊತೆಗೆ 15 ವರ್ಷದ ವೈಭವ್, ದುಲೀಪ್ ಟ್ರೋಫಿ ಇತಿಹಾಸದಲ್ಲೇ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಎರಡನೇ ಇನ್ನಿಂಗ್ಸ್ನಲ್ಲೂ ಸಹ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿದ ವೈಭವ್ ಸೂರ್ಯವಂಶಿ, 43 ಎಸೆತಗಳಲ್ಲಿ 40 ರನ್ ಗಳಿಸಿ ಈಸ್ಟ್ ಜೋನ್ಗೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ, ಸೆಂಟ್ರಲ್ ಜೋನ್ ನಾಯಕ ರಜತ್ ಪಾಟಿದಾರ್ ಹಿಡಿದ ಭರ್ಜರಿ ಕ್ಯಾಚ್ ಸೂರ್ಯವಂಶಿ ಇನ್ನಿಂಗ್ಸ್ಗೆ ಅಂತ್ಯ ಹಾಡಿತು. ಇನ್ನೂ ಇಶಾನ್ ಕಿಶನ್ ಅವರು ವಿಕೆಟ್ ಕಾಪಾಡಿಕೊಂಡು ಈಸ್ಟ್ ಜೋನ್ ತಂಡವನ್ನು ಜಯದ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಒಟ್ಟಿನಲ್ಲಿ ಇದೀಗ ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿರುವ ಹೆಸರು ಮಾತ್ರ ವೈಭವ್ ಸೂರ್ಯವಂಶಿ ಅವರದ್ದು. ಯಾಕಂದ್ರೆ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ಮಾಡುವ ಬ್ಯಾಟಿಂಗ್ ಶೈಲಿ ಮಾತ್ರ ಎಂತಹವರನ್ನು ಕೂಡ ಮಂತ್ರಮುಗ್ದರನ್ನಾಗಿಸಿಬಿಡುತ್ತದೆ.


Click it and Unblock the Notifications
