ಬಡತನದಲ್ಲಿ ಅರಳಿದ ಹೂವು: ಚಿನ್ನದ ಪದಕಕ್ಕೆ ಮುತ್ತಿಟ್ಟ ದಾವಣಗೆರೆಯ ಉಮೇಶ್
ದಾವಣಗೆರೆ, ಜೂ. 9: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ, ತುಡಿತ ಇತ್ತು. ಇದಕ್ಕಾಗಿ ಕಠಿಣ ಅಭ್ಯಾಸ ಸಹ ನಡೆಸಿದ್ದರು. ಈಗ ಅದು ಫಲ ಕೊಟ್ಟಿದೆ. ಮಾಡಿದ ಶ್ರಮಕ್ಕೆ ಚಿನ್ನದ ಪದಕವೇ ದಕ್ಕಿದೆ. ಹೌದು. ಸೌತ್ ಏಷಿಯನ್ ಕುಸ್ತಿ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಉಮೇಶ್ ಜಮಾದಾರ್‌ಗೆ ಚಿನ್ನದ ಪದಕ ಲಭಿಸಿದೆ.
ಕಳೆದ ಆರು ವರ್ಷಗಳಿಂದ ದಾವಣಗೆರೆ ಕ್ರೀಡಾ ಹಾಸ್ಟಲ್‌ನಲ್ಲಿದ್ದು ಕುಸ್ತಿ ತರಬೇತಿ ಪಡೆಯುತ್ತಿರುವ ಉಮೇಶ್ ಅವರು ಈ ಹಿಂದೆ ಎರಡು ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದರು. ಈ ಮೂಲಕ ದಾವಣಗೆರೆ ಹೆಸರನ್ನು ಕುಸ್ತಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
ಹೌದು, ಈ ಯುವಕನಿಗೆ ಕುಸ್ತಿಯಲ್ಲಿ ಮಿಂಚುವ ಆಸೆ, ಮನೆಯಲ್ಲಿ ಬಡತನ ಇದ್ದರೂ ಛಲಬಿಡದ ಆ ಯುವಕ ಇಂದು ಭಾರತಕ್ಕೆ ಚಿನ್ನ ಪದಕ ತಂದುಕೊಟ್ಟಿದ್ದಾರೆ. ದಾವಣಗೆರೆಯ ಕ್ರೀಡಾ ಹಾಸ್ಟೆಲ್ನಲ್ಲಿದ್ದುಕೊಂಡು ತರಬೇತಿ ಪಡೆಯುತ್ತಿರುವ ಯುವಕ ಉಮೇಶ್ ಜಮಾದಾರ್ ಥೈಲ್ಯಾಂಡ್‌ನಲ್ಲಿ ನಡೆದ ಸೌತ್ ಏಷ್ಯನ್ ಇಂಟರ್ನ್ಯಾಷನಲ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕುಸ್ತಿ ಪಟು ಉಮೇಶ್ ಜಮಾದಾರ್ ಕಳೆದ 13 ವರ್ಷಗಳಿಂದ ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿನ ಕುಸ್ತಿ ತರಬೇತುದಾರರಾದ ಶಿವಾನಂದ್ ಅವರ ಬಳಿ ತರಬೇತಿ ಪಡೆದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.

65 ಕೆಜಿ ವಿಭಾಗದಲ್ಲಿ ಭಾರತಕ್ಕೆ ಚಿನ್ನ
ಥೈಲ್ಯಾಂಡ್ ನಲ್ಲಿ ನಡೆದ ಸೌತ್ ಏಷ್ಯನ್ ಇಂಟರ್ನ್ಯಾಷನಲ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ಉಮೇಶ್ ಅವರು 65 ಕೆಜಿ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಮಲೇಷಿಯಾ ದೇಶದ ಕುಸ್ತಿ ಪಟುವಿನ ವಿರುದ್ಧ 10-00 ಅಂತರದಲ್ಲಿ ಗೆದ್ದು ಬೀಗಿದ್ದಾರೆ . ಇದಲ್ಲದೆ ಉಮೇಶ್ ಮಲೇಷಿಯಾ, ಥೈಲ್ಯಾಂಡ್, ಇಂಡೋನೇಷ್ಯಾ, ಸಿಂಗಾಪುರ್, ನೇಪಾಳ್ ದೇಶದ ಕುಸ್ತಿಪಟುಗಳನ್ನು ಬಗ್ಗು ಬಡಿದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಉಮೇಶ್ ಜಮಾದಾರ್ ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮದ ನಿವಾಸಿಯಾಗಿದ್ದು, ಕುಸ್ತಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಕನಸು ಕಟ್ಟಿಕೊಂಡಿದ್ದರು.

ಬಡತನದಲ್ಲಿ ಅರಳಿದ ಈ ಕ್ರೀಡಾ ಪ್ರತಿಭೆ
ಬಡತನದಲ್ಲಿ ಅರಳಿದ ಈ ಕ್ರೀಡಾ ಪ್ರತಿಭೆ ಉಮೇಶ್ ಕಷ್ಟಪಟ್ಟು ಸಾಧನೆ ಮಾಡಿ ತೋರಿಸಿದ್ದಾರೆ. ಈ ಹಿಂದೆ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿಯೂ ಚಿನ್ನದ ಪದಕ ಪಡೆದಿದ್ದರು. ಇದೀಗ ಥೈಲ್ಯಾಂಡ್ ನಲ್ಲಿ ಮತ್ತೊಮ್ಮೆ ಚಿನ್ನದ ಪದಕ ಗೆದ್ದು ದಾವಣಗೆರೆ ಹಾಗು ಬೀದರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಉಮೇಶ್ ಅವರ ಈ ಸಾಧನೆಗೆ ಕುಸ್ತಿ ತರಬೇತುದಾರರಾದ ಶಿವಾನಂದ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಸದ್ಯ ಉಮೇಶ್ ಅವರು ದಾವಣಗೆರೆಯ ಕ್ರೀಡಾ ಹಾಸ್ಟೆಲ್ ನದಲ್ಲಿದ್ದುಕೊಂಡೇ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications