Champions Trophy: ಭಾರತ ತಂಡಕ್ಕೆ 58 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಬಿಸಿಸಿಐ
ಚಾಂಪಿಯನ್ಸ್ ಟ್ರೋಫಿ ಗೆದ್ದು ಬಂದಿರುವ ಭಾರತ ತಂಡದ ಆಟಗಾರರು, ಆಡಳಿತ ಸಿಬ್ಬಂದಿಗೆ ಭರ್ಜರಿ ಲಾಟರಿ ಹೊಡೆದಿದೆ. ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬರೋಬ್ಬರಿ 58 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಏಕದಿನ ಮಾದರಿಯಲ್ಲಿ 12 ವರ್ಷಗಳ ಐಸಿಸಿ ಪ್ರಶಸ್ತಿಯ ಬರವನ್ನು ಕೊನೆಗಾಣಿಸಿದ ರೋಹಿತ್ ಶರ್ಮಾ ಪಡೆಗೆ ಭರ್ಜರಿ ಬಹುಮಾನ ಸಿಕ್ಕಿದೆ.
ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಐಸಿಸಿ 20 ಕೋಟಿ ರೂಪಾಯಿ ಬಹುಮಾನ ನೀಡಿತ್ತು. ಇದೀಗ ಬಿಸಿಸಿಐ 58 ಕೋಟಿ ರೂಪಾಯಿ ನಗದು ಬಹುಮಾನ ನೀಡಿದೆ. ಈ 58 ಕೋಟಿ ರೂಪಾಯಿ ಬಹುಮಾನದ ಹಣವನ್ನು ತಂಡದ ಕೋಚ್, ಸಹಾಯಕ ಕೋಚ್ ಸೇರಿದಂತೆ ತಂಡದ ಎಲ್ಲಾ ಸದಸ್ಯರಿಗೆ ಹಂಚಿಕೆ ಮಾಡಲಾಗಿದೆ.

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನ್ಯೂಜಿಲೆಂಡ್ ಫೈನಲ್ ಪಂದ್ಯದಲ್ಲಿ ಭಾರತದ ಎದುರು ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಬಿಸಿಸಿಐ ಅಧ್ಯಕ್ಷರು ಹೇಳಿದ್ದೇನು?
ಐಸಿಸಿ ಪ್ರಶಸ್ತಿಗಳನ್ನು ಗೆಲ್ಲುವುದು ವಿಶೇಷವಾಗಿದೆ. ಭಾರತ ತಂಡದ ಶ್ರೇಷ್ಠ ಆಟ ಮತ್ತು ಅವರ ಸಮರ್ಪಣೆಯನ್ನು ಗುರುತಿಸಿ ಈ ಬಹುಮಾನ ನೀಡಲಾಗಿದೆ. ತೆರೆಮರೆಯಲ್ಲಿ ಕೆಲಸ ಮಾಡಿರುವ ತಂಡದ ಪ್ರತಿಯೊಬ್ಬರ ಪರಿಶ್ರಮಕ್ಕೂ ಮನ್ನಣೆ ಸಿಕ್ಕಂತಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ.
ಬಾಂಗ್ಲಾದೇಶದ ವಿರುದ್ಧ 6 ವಿಕೆಟ್‌ಗಳ ಗೆಲುವಿನ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಿ ಭಾರತ ಬಳಿಕ ಪ್ರಶಸ್ತಿ ಗೆಲ್ಲುವವರೆಗೂ ತಿರುಗಿ ನೋಡಲಿಲ್ಲ. ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ರೋಚಕ ಗೆಲುವು ಸಾಧಸಿದರು. ನ್ಯೂಜಿಲೆಂಡ್ ವಿರುದ್ಧ 44 ರನ್‌ಗಳ ಗೆಲುವು ಸಾಧಿಸುವ ಮೂಲಕ ಲೀಗ್ ಹಂತದಲ್ಲಿ ಮೂರು ಪಂದ್ಯ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತ್ತು.
ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ 2023ರ ಏಕದಿನ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡು ಫೈನಲ್‌ಗೆ ಪ್ರವೇಶಿಸಿತ್ತು. ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ 2013ರ ಬಳಿಕ ಭಾರತ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿ ಗೆದ್ದು ಸಾಧನೆ ಮಾಡಿತು.












Click it and Unblock the Notifications