T20 World Cup: ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವುದು ಯಾರು? ಕ್ಯಾಪ್ಟನ್ ಹೇಳಿದ್ದೇನು?
ಐಪಿಎಲ್ ಗುಂಗಿನಲ್ಲಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇನ್ನೊಂದು ಸರಣಿ ಕಾಯುತ್ತಿದೆ. ಐಪಿಎಲ್ ಮುಗಿಯುತ್ತಿದ್ದಂತೆ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪ್ರಯಾಣವನ್ನು ಬೆಳೆಸಲಿದೆ. ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು ತಮ್ಮ ತಂಡವನ್ನು ಪ್ರಕಟಿಸಬೇಕಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಸಹ ಕಾರ್ಯ ಪ್ರವೃತ್ತವಾಗಿದೆ. ಇತ್ತೀಚಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಆಯ್ಕೆ ಸಮಿತಿಯ ಅಜಿತ್ ಅಗರ್ಕರ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಚರ್ಚೆಗಳು ನಡೆದಿವೆ.

ಯುವಕರನ್ನು ನಾಚಿಸುವಂತಹ ಬ್ಯಾಟಿಂಗ್
ಸದ್ಯಕ್ಕೆ ಅಭಿಮಾನಿಗಳಲ್ಲಿ ಇರುವ ಪ್ರಶ್ನೆ ಒಂದೆ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸ್ಥಾನ ಲಭಿಸುತ್ತದಾ ಎಂದು. ಏಕೆಂದರೆ ಬಿಸಿಸಿಐ ಆಯ್ಕೆ ಸಮಿತಿ ಹಿರಿಯ ಆಟಗಾರರಿಗಿಂತಲೂ ಯುವ ಆಟಗಾರರೆ ಬೆಸ್ಟ್ ಎಂದು ನಂಬಿದೆ. ಆದರೆ ಪ್ರಸಕ್ತ ಐಪಿಎಲ್‌ನಲ್ಲಿ ಯುವ ಆಟಗಾರರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಹಿರಿಯ ಆಟಗಾರರು ಯುವಕರನ್ನು ನಾಚಿಸುವಂತೆ ಬ್ಯಾಟ್ ಮಾಡುತ್ತಿದ್ದಾರೆ. ಹಿರಿಯ ಆಟಗಾರ ವಿರಾಟ್ ಕೊಹ್ಲಿ ತಮ್ಮ ಮೇಲಿನ ಟೀಕೆಗೆ ಮೈದಾನದಲ್ಲಿ ಉತ್ತರ ನೀಡಿದ್ದಾರೆ.
ಐಪಿಎಲ್‌ನಲ್ಲಿ ರನ್ ಬೇಟೆ
ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಸದ್ಯ ಐಪಿಎಲ್‌ನಲ್ಲಿ ಆಡುತ್ತಿರುವ ಧಾಟಿಯನ್ನು ಕಂಡು, ಟೀಕಾಕಾರರು ಸಹ ಬಾಯಿ ಮುಚ್ಚಿದ್ದಾರೆ. ಇವರು ಪ್ರಸಕ್ತ ಐಪಿಎಲ್‌ನಲ್ಲಿ 1 ಶತಕ ಹಾಗೂ ಎರಡು ಅರ್ಧಶತಕ ಬಾರಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದು, ತಮ್ಮನ್ನು ಟಿ20 ವಿಶ್ವಕಪ್‌ಗೆ ಪರಿಗಣಿಸುವಂತೆ ಬ್ಯಾಟ್ ಮಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಆರಂಭಿಕರಾಗಿ ಆಡುತ್ತಾರೆ. ಪ್ರಸಕ್ತ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಷಯದಲ್ಲೂ ವಿರಾಟ್ ಮುಂಚೂಣಿಯಲ್ಲಿದ್ದಾರೆ. ಆಯ್ಕೆಗಾರರು T20 ವಿಶ್ವಕಪ್‌ನಲ್ಲಿ ರೋಹಿತ್ ಜೊತೆಗೆ ವಿರಾಟ್ ಅವರನ್ನು ಆರಂಭಿಕರಾಗಿ ಕಣಕ್ಕೆ ಇಳಿಸಬಹುದು ಎಂದು ಅನೇಕ ವರದಿಗಳು ತಿಳಿಸಿವೆ. ಇದೀಗ ರೋಹಿತ್ ಶರ್ಮಾ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವಾಗಿ ದೊಡ್ಡ ಹೇಳಿಕೆ ನೀಡಿದ್ದಾರೆ. ಆದರೂ ಅವರು ಏನನ್ನೂ ಸ್ಪಷ್ಟಪಡಿಸಿಲ್ಲ.
ವಿರಾಟ್ ಆಡುತ್ತಾರಾ ಟಿ20 ವಿಶ್ವಕಪ್?
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಆಡುತ್ತಾರಾ ಎಂಬ ಪ್ರಶ್ನೆಗೆ ನಾವು ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಐಸಿಸಿ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಹೇಗಿದೆ ಐಪಿಎಲ್‌ನಲ್ಲಿ ಪ್ರದರ್ಶನ
ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ ಇದುವರೆಗೆ 7 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ವಿರಾಟ್ 72.20ರ ಸರಾಸರಿಯಲ್ಲಿ 361 ರನ್ ಗಳಿಸಿದ್ದಾರೆ. ಈ ಸೀಸನ್ ನಲ್ಲಿ ವಿರಾಟ್ 147.35 ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ರೋಹಿತ್ ಶರ್ಮಾ 6 ಪಂದ್ಯಗಳಲ್ಲಿ 52.20 ರ ಸರಾಸರಿಯಲ್ಲಿ 261 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಸೇರಿದೆ.












Click it and Unblock the Notifications