T20 World Cup: ಅಫ್ಘಾನಿಸ್ತಾನ ವಿರುದ್ದ ಅಬ್ಬರಿಸಿದ ದಕ್ಷಿಣ ಆಫ್ರಿಕಾ ಫೈನಲ್‌ಗೆ
ದಕ್ಷಿಣ ಆಫ್ರಿಕಾ ಭರ್ಜರಿ ಪ್ರದರ್ಶನ ನೀಡಿ ಇದೆ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಮಹತ್ವದ ಪಂದ್ಯದಲ್ಲಿ ಸೊಗಸಾದ ದಾಳಿಯನ್ನು ಸಂಘಟಿಸಿದ ಐಡೆನ್ ಮಾರ್ಕ್ರಾಮ್ ಪಡೆ ಅಬ್ಬರಿಸಿದೆ.
ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿ ಎದುರಿಸುವಲ್ಲಿ ವಿಫಲವಾಗಿ 11.5 ಓವರ್‌ಗಳಲ್ಲಿ 56 ರನ್‌ಗಳಿಗೆ ಆಲೌಟ್ ಆಯಿತು. ಈ ಅವಧಿಯಲ್ಲಿ, ಆಫ್ರಿಕಾ ಪರ ಮಾರ್ಕೊ ಜಾನ್ಸೆನ್ ಮತ್ತು ತಬ್ರೇಜ್ ಶಮ್ಸಿ ತಲಾ 3 ವಿಕೆಟ್ ಪಡೆದರು.

ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಬ್ಯಾಟರ್‌ಗಳು ವಿಫಲರಾದರು. ಆರಂಭದಿಂದಲೂ ಆಫ್ರಿಕನ್ ಬೌಲರ್‌ಗಳು ವಿಕೆಟ್ ಪಡೆಯುತ್ತಾ ಸಾಗಿದರು. ಹರಿಣಗಳ ವೇಗದ ದಾಳಿಯನ್ನು ಎದುರಿಸುವಲ್ಲಿ ಆಫ್ಘಾನ್ ವಿಫಲವಾಯಿತು. ದಕ್ಷಿಣ ಆಫ್ರಿಕಾ ಪರ ಏಳು ವಿಕೆಟ್‌ಗಳನ್ನು ವೇಗಿಗಳನ್ನು ಪಡೆದರೆ, ಮೂರು ವಿಕೆಟ್‌ಗಳನ್ನು ಸ್ಪಿನ್ ಬೌಲರ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 8.5 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ದಕ್ಷಿಣ ಆಫ್ರಿಕಾ ಪರ ರೆಜಾ ಹೆಂಡ್ರಿಕ್ಸ್ (ಅಜೇಯ 29) ಹಾಗೂ ಐಡೆನ್ ಮಾರ್ಕ್ರಾಮ್ (ಅಜೇಯ 23) ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ನೆರವಾದರು.
ಪವರ್ ಪ್ಲೇನಲ್ಲಿ ಬಿತ್ತು ಐದು ವಿಕೆಟ್
ಮೊದಲು ಬ್ಯಾಟ್ ಮಾಡಲು ಬಂದ ಅಫ್ಘಾನಿಸ್ತಾನಕ್ಕೆ ಮೊದಲ ಓವರ್ ನ ಕೊನೆಯ ಎಸೆತದಲ್ಲಿ ಸ್ಟಾರ್ ಓಪನರ್ ರಹಮಾನುಲ್ಲಾ ಗುರ್ಬಾಜ್ ಸೊನ್ನೆ ಸುತ್ತಿದ್ದು ತಂಡಕ್ಕೆ ಪೆಟ್ಟು ಬಿದ್ದಿತು. ಗುಲ್ಬದಿನ್ ನೈಬ್ ಅವರಿಗೂ ಮಾರ್ಕೊ ಜಾನ್ಸೆನ್ ಖೆಡ್ಡಾ ತೋಡಿದರು.
ನಾಲ್ಕನೇ ಓವರ್‌ನಲ್ಲಿ ರಬಾಡ ಇಬ್ರಾಹಿದ್ ಝದ್ರಾನ್ (02) ಮತ್ತು ಮೊಹಮ್ಮದ್ ನಬಿ (00) ಅವರನ್ನು ಬೌಲ್ಡ್ ಮಾಡಿದರು. ಐದನೇ ಓವರ್‌ನ ಕೊನೆಯ ಎಸೆತದಲ್ಲಿ ನಂಗೆಯಾಲಿಯಾ ಖರೋಟೆ ಅವರ ವಿಕೆಟ್ ಪಡೆಯುವಲ್ಲಿ ಮಾರ್ಕೊ ಜಾನ್ಸೆನ್ ವಿಫಲರಾದರು.
ಅಜ್ಮತುಲ್ಲಾ ಉಮರ್ಜಾಯ್ ಅಫ್ಘಾನಿಸ್ತಾನದ ಪರ ಗರಿಷ್ಠ ರನ್ ಕಲೆ ಹಾಕಿದ ಸಾಧನೆ ಮಾಡಿದರು. ಇವರು 10 ರನ್ ಬಾರಿಸಿ ಆರನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿದರು. ಉಳಿದಂತೆ ಕರೀಂ ಜನತ್ (8), ನೂರ್ ಅಹ್ಮದ್ (0), ಔಟಾದರು. ರಶೀದ್ ಖಾನ್ (8), ನವೀನ್ ಉಲ್ ಹಕ್ (2) ರನ್ ಬಾರಿಸುವಲ್ಲಿ ವಿಫಲರಾದರು.
ವೇಗಿಗಳ ಅಬ್ಬರ
ದಕ್ಷಿಣ ಆಫ್ರಿಕಾ ತಂಡದ ವೇಗಿಗಳಾದ ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ ಸೊಗಸಾದ ದಾಳಿ ಸಂಘಟಿಸಿದರು. ಇವರ ಬೌಲಿಂಗ್ ಎದುರಿಸುವಲ್ಲಿ ಅಫ್ಘಾನ್ ಸಂಪೂರ್ಣ ವಿಫಲವಾಯಿತು. ಮಾರ್ಕೊ ಜಾನ್ಸೆನ್ 16 ರನ್ ನೀಡಿ ಮೂರು ವಿಕೆಟ್ ಪಡೆದರೆ, ತಬ್ರೆಜ್ ಶಮ್ಸಿ 6 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ರಬಾಡ ಹಾಗೂ ಅನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್ ಕಬಳಿಸಿದರು.












Click it and Unblock the Notifications