T20 World Cup 2026: ಟಿ-20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡುವುದಿಲ್ಲ ಎಂದ ಪಾಕಿಸ್ತಾನಕ್ಕೆ ಎದುರಾಯ್ತು ದೊಡ್ಡ ಕಂಟಕ
T20 World Cup 2026: ಇತ್ತೀಚೆಗಷ್ಟೇ ಟಿ-20 ವಿಶ್ವಕಪ್ 2026 ಟೂರ್ನಿಯಿಂದ ಬಾಂಗ್ಲಾದೇಶದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪಾಪಿ ಪಾಕ್ ನರಿ ಬುದ್ಧಿ ಮುಂದುವರೆಸಿದ್ದು, ಭಾರತದ ಪರ ಆಡುವುದಿಲ್ಲ ಎಂದು ಹೇಳಿದೆ. ಇದರಿಂದ ಹಲವು ಕ್ರಿಕೆಟ್ ಮಂಡಳಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಆಗಲಿದೆ. ಇದಕ್ಕೆ ಕಾರಣವೂ ಕೂಡ ಇದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಧುನಿಕ ಕ್ರಿಕೆಟ್ ಆರ್ಥಿಕತೆಯಲ್ಲಿ ಕೆಲವು ಪಂದ್ಯಗಳು ಟ್ರೋಫಿಗಳಿಗಿಂತಲೂ ಮಹತ್ವವಾಗಿವೆ. ಟಿ-20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಎಂದರೆ ಅದೇ ಅತಿದೊಡ್ಡ ಪಂದ್ಯ. ಟೂರ್ನಿಯ ಆರ್ಥಿಕ ಬಲ, ಪ್ರಸಾರ ಹಕ್ಕುಗಳ ಮೌಲ್ಯವನ್ನು ಹೆಚ್ಚಿಸುವುದು ಹಾಗೂ ಸ್ವತಃ ಅಷ್ಟು ಗಮನ ಸೆಳೆಯಲು ಸಾಧ್ಯವಿಲ್ಲದ ಹಲವು ಕ್ರಿಕೆಟ್ ಮಂಡಳಿಗಳಿಗೆ ಪರೋಕ್ಷವಾಗಿ ಆದಾಯ ಒದಗಿಸುವ ಪಂದ್ಯ ಇದಾಗಿದೆ. ಇದೀಗ ಪಾಕ್ ಭಾರತದ ವಿರುದ್ಧ ಆಡುವುದಿಲ್ಲ ಎಂದು ಹೇಳಿರುವುದು ದೊಡ್ಡ ಹೊಡೆತ ಬಿದ್ದಂತಾಗಿದೆ.

ಇಂತಹ ಸಂದರ್ಭದಲ್ಲಿ ಪಾಕಿಸ್ತಾನ ಸರ್ಕಾರ ವಿಶ್ವಕಪ್‌ನಲ್ಲಿ ತಂಡದ ಪಾಲ್ಗೊಳ್ಳುವಿಕೆಗೆ ಅನುಮತಿ ನೀಡಿದೆ. ಆದರೆ, ಭಾರತದ ವಿರುದ್ಧದ ಪಂದ್ಯಕ್ಕೆ ಒಪ್ಪಿಗೆ ನೀಡದಿರುವುದೇ ಇದೀಗ ಸಮಸ್ಯೆಯಾಗಿರುವುದು. ಈ ಹಿನ್ನೆಲೆ ಐಸಿಸಿ ಪಾಕ್‌ಗೆ ಎಚ್ಚರಿಕೆ ಸಂದೇಶವನ್ನು ನೀಡಿದೆ. ಹಾಗಾದ್ರೆ ಇದರಲ್ಲಿ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
"ಈ ನಿರ್ಧಾರವು ಪಾಕಿಸ್ತಾನದ ಸ್ವಂತ ದೇಶದ ಕ್ರಿಕೆಟ್‌ಗೆ ದೀರ್ಘಾವಧಿಯಲ್ಲಿ ಉಂಟುಮಾಡಬಹುದಾದ ಪರಿಣಾಮಗಳನ್ನು ಪಿಸಿಬಿ ಎದುರಿಸಬೇಕಾಗುತ್ತೆ. ಏಕೆಂದರೆ ಇದು ಜಾಗತಿಕ ಕ್ರಿಕೆಟ್ ಪರಿಸರದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಆ ಜಾಗತಿಕ ಕ್ರಿಕೆಟ್ ವ್ಯವಸ್ಥೆಯ ಲಾಭಾಂಶ ಪಡೆಯುವ ಸಂಸ್ಥೆಯೇ ಪಿಸಿಬಿಯಾಗಿದೆ," ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಪಂದ್ಯದ ಆದಾಯದ ವಿವರ: ಭಾರತ-ಪಾಕಿಸ್ತಾನ ಟಿ-20 ಪಂದ್ಯವನ್ನು ಪ್ರಸಾರ ಹಕ್ಕುಗಳು, ಜಾಹೀರಾತು ಪ್ರೀಮಿಯಂಗಳು, ಪ್ರಾಯೋಜಕತ್ವ ಚಟುವಟಿಕೆಗಳು, ಟಿಕೆಟ್ ಮಾರಾಟ ಹಾಗೂ ಕಾನೂನುಬದ್ಧ ಬೆಟ್ಟಿಂಗ್ ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳನ್ನು ಗಮನಿಸಿದರೆ, ಅದರ ಮೌಲ್ಯವನ್ನು ಅಂದಾಜಿಸಿದರೂ ಸುಮಾರು 500 ಮಿಲಿಯನ್ ಅಮೆರಿಕನ್ ಡಾಲರ್‌ಗಳು (ಸುಮಾರು ₹4,500 ಕೋಟಿ) ಎಂದು ಲೆಕ್ಕ ಹಾಕಲಾಗುತ್ತದೆ.
ಕ್ರಿಕೆಟ್ ಜಗತ್ತಿನ ಮಹತ್ವದ ಪಂದ್ಯ: ಒಂದೇ ಒಂದು ಕ್ರಿಕೆಟ್ ಪಂದ್ಯ ಇಷ್ಟೊಂದು ಆರ್ಥಿಕ ಮೌಲ್ಯ ಹೊಂದಿರುವುದು ಅಪರೂಪ. ವಾಸ್ತವವಾಗಿ, ಇದಕ್ಕೆ ಸಮಾನವಾದ ಮತ್ತೊಂದು ಪಂದ್ಯ ಕ್ರಿಕೆಟ್ ಜಗತ್ತಿನಲ್ಲಿ ಇಲ್ಲ ಅಂತಲೇ ಹೇಳಬಹುದು. ಪ್ರಸಾರಕರ ದೃಷ್ಟಿಯಲ್ಲಿ ಇದು ದೊಡ್ಡ ಆದಾಯದ ಪಂದ್ಯವಾಗಿದೆ.
ಭಾರತ-ಪಾಕಿಸ್ತಾನ ಟಿ-20 ಪಂದ್ಯಕ್ಕೆ 10 ಸೆಕೆಂಡ್‌ಗಳ ಜಾಹೀರಾತಿಗೆ ಸಾಮಾನ್ಯವಾಗಿ ₹25 ರಿಂದ ₹40 ಲಕ್ಷದವರೆಗೆ ದರ ನಿಗದಿಯಾಗುತ್ತದೆ. ಇದು ಭಾರತವು ಇತರ ಶ್ರೇಷ್ಠ ತಂಡಗಳ ವಿರುದ್ಧ ಆಡುವ ನಾಕೌಟ್ ಪಂದ್ಯಗಳ ಜಾಹೀರಾತು ದರಗಳನ್ನೂ ಮೀರಿಸುತ್ತದೆ. ಆ ಪಂದ್ಯವೇ ಮಿಸ್ ಆದರೆ, ಸಂಪೂರ್ಣ ಟೂರ್ನಿಯ ಹಣಕಾಸು ರಚನೆಗೆ ದೊಡ್ಡ ಬದಲಾವಣೆ ಆಗುವುದು ಅನಿವಾರ್ಯ.
ಯಾರಿಗೆ ಎಷ್ಟು ನಷ್ಟ?: ತಕ್ಷಣದ ಆರ್ಥಿಕ ಹೊಡೆತ ಎದುರಿಸುವವರು ಪ್ರಸಾರ ಹಕ್ಕು ಹೊಂದಿರುವ ಸಂಸ್ಥೆಗಳೇ. ಭಾರತ-ಪಾಕಿಸ್ತಾನ ಪಂದ್ಯದ ಜಾಹೀರಾತು ಆದಾಯ ಮಾತ್ರವೇ ಸುಮಾರು ₹300 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಸಾರಕರು ಖಚಿತತೆಯ ಮೇಲೆ ಹಣ ಹೂಡುತ್ತಾರೆ. ಟೂರ್ನಿಯ ಮಧ್ಯದಲ್ಲಿ ಇಂತಹ ಅಗ್ರಗಣ್ಯ ಪಂದ್ಯವೇ ಕೈ ತಪ್ಪುವುದು ಕೇವಲ ವೇಳಾಪಟ್ಟಿಯ ತೊಂದರೆಯಲ್ಲ. ಅದು ಮೌಲ್ಯದ ನೇರ ಉಲ್ಲಂಘನೆಯಂತಿದೆ.
ಈಗಾಗಲೇ ಜಿಯೋಸ್ಟಾರ್ ಸಂಸ್ಥೆ ಹಣಕಾಸು ನಷ್ಟವನ್ನು ಉಲ್ಲೇಖಿಸಿ ಐಸಿಸಿಯಿಂದ ಅಧಿಕೃತವಾಗಿ ರಿಯಾಯಿತಿ ಕೇಳಿಕೊಂಡಿದ್ದು, ಈ ಬೆಳವಣಿಗೆ ಅವರ ಅರ್ಜಿಗೆ ಮತ್ತಷ್ಟು ಬಲ ನೀಡುವ ಸಾಧ್ಯತೆ ಇದೆ. ವಿಶ್ವಕಪ್‌ನ ಪ್ರತಿಯೊಂದು ಪಂದ್ಯಕ್ಕೂ ಆಂತರಿಕವಾಗಿ ಸರಾಸರಿ ಸುಮಾರು ₹138.7 ಕೋಟಿ ಮೌಲ್ಯ ನಿಗದಿಪಡಿಸಲಾಗಿದೆ.
ಪ್ರಸಾರ ಸಂಸ್ಥೆಗಳು ತಮ್ಮ ನಷ್ಟದ ಹಣವನ್ನು ವಾಪಸ್ ಪಡೆಯಲು ಮುಂದಾದರೆ, ಅದರ ಆರ್ಥಿಕ ನಷ್ಟವನ್ನು ಮೊದಲಿಗೆ ಐಸಿಸಿ ಬರಿಸಲಿದೆ. ನಂತರ ಅದನ್ನು ಸದಸ್ಯ ಮಂಡಳಿಗಳಿಗೆ ಹಂಚಲಾಗುತ್ತದೆ. ಕೇಂದ್ರ ಆದಾಯ ಕಡಿಮೆಯಾದರೆ, ಐಸಿಸಿಯಿಂದ ಸದಸ್ಯ ಮಂಡಳಿಗಳಿಗೆ ದೊರೆಯುವ ಅನುದಾನವೂ ಇಳಿಕೆಯಾಗುತ್ತದೆ. ಇದರಿಂದ ಭಾರತ ಮತ್ತು ಪಾಕಿಸ್ತಾನ ಮಾತ್ರವಲ್ಲ, ಐಸಿಸಿ ಅನುದಾನಗಳ ಮೇಲೆ ಬಹುಮಟ್ಟಿಗೆ ಅವಲಂಬಿತವಾಗಿರುವ ಸಹಭಾಗಿತ್ವ ರಾಷ್ಟ್ರಗಳು ಹಾಗೂ ಸಣ್ಣ ಪೂರ್ಣ ಸದಸ್ಯ ಮಂಡಳಿಗಳಿಗೂ ಹೊಡೆತ ಬಿದ್ದಂತಾಗಲಿದೆ.
ವರದಿಗಳ ಪ್ರಕಾರ, ಭಾರತ-ಪಾಕಿಸ್ತಾನ ಪಂದ್ಯ ನಡೆಯದೇ ಹೋದರೆ, ನೇರ ಹಾಗೂ ಪರೋಕ್ಷ ಆದಾಯ ಸೇರಿಸಿ ಎರಡೂ ಮಂಡಳಿಗಳು ತಲಾ ಸುಮಾರು ₹200 ಕೋಟಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಭಾರತದ ದೃಷ್ಟಿಯಲ್ಲಿ ಇದು ನೋವಿನ ಸಂಗತಿಯೇ ಸರಿ, ಆದರೆ ಇದು ನಿಭಾಯಿಸುವುದರ ಮೇಲೆ ನಿಂತಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿಯ ಒಟ್ಟು ಆದಾಯದಲ್ಲಿ 5.75 ಶೇಕಡಾ ಪಾಲನ್ನು ಪಡೆಯುತ್ತದೆ. ಇದು ವರ್ಷಕ್ಕೆ ಸುಮಾರು 34.51 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟಾಗುತ್ತದೆ. ಈ ಆದಾಯದ ಪಾಲನೆ, ನಂಬಿಕೆ ಹಾಗೂ ನಿರಂತರ ಪಾಲ್ಗೊಳ್ಳುವಿಕೆಯ ಮೇಲೆ ಅವಲಂಬಿತವಾಗಿದೆ. ಪ್ರಮುಖವಾಗಿ, ಸ್ವಯಂಪ್ರೇರಿತವಾಗಿ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಅನಿವಾರ್ಯ ಪರಿಸ್ಥಿತಿ ಅಡಿಯಲ್ಲಿ ಪರಿಗಣಿಸಲಾಗುವುದಿಲ್ಲ.
ಪಾಕ್‌ಗೆ ಎದುರಾಗುವ ಸಮಸ್ಯೆಗಳು
* ವಿಮಾ ರಕ್ಷಣೆಯೇ ಇಲ್ಲ
* ಕಾನೂನು ರಕ್ಷಣೆಯೇ ಇಲ್ಲ
* ನಷ್ಟ, ದಂಡ ಹಾಗೂ ಪರಿಹಾರ ಬೇಡಿಕೆಗಳಿಗೆ ಸಂಪೂರ್ಣ ಹೊಣೆಗಾರಿಕೆ
* ಐಸಿಸಿ ಸದಸ್ಯರ ಪಾಲ್ಗೊಳ್ಳುವಿಕೆ ಒಪ್ಪಂದ ಉಲ್ಲಂಘನೆಯಿಂದ ಟೂರ್ನಿ ಪಾವತಿಗಳನ್ನು ತಡೆಹಿಡಿಯುವಿಕೆ, ಹೆಚ್ಚುವರಿ ದಂಡ ಹಾಗೂ ಪ್ರಸಾರ ಸಂಸ್ಥೆಗಳ ಕಾನೂನು ಕ್ರಮ ಎದುರಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಆರಂಭಿಕ ನಷ್ಟಕ್ಕಿಂತಲೂ ಹೆಚ್ಚಾಗಿ ಹಲವು ಮಿಲಿಯನ್ ಡಾಲರ್‌ಗಳಷ್ಟು ಆರ್ಥಿಕ ನಷ್ಟ ಉಂಟಾಗಬಹುದು.
ಪಾಕಿಸ್ತಾನಕ್ಕೆ ಹೊಡೆತ
* ಪಾಕಿಸ್ತಾನ ಸಂಬಂಧಿತ ಪ್ರಸಾರ ಹಕ್ಕುಗಳ ಮೌಲ್ಯ ಕುಸಿತ
* ಕಡಿತ ದರದಲ್ಲಿ ಹಕ್ಕು ಪ್ಯಾಕೇಜ್‌ಗಳು ಮಾರಾಟವಾಗ
* ಪಾಕಿಸ್ತಾನ ಪಂದ್ಯಗಳಿಗೆ ಸಂಬಂಧಿಸಿದ ಪ್ರಾಯೋಜಕತ್ವ ಆಸಕ್ತಿ ಕಡಿಮೆಯಾಗಲು ಕಾರಣವಾಗಬಹುದು
ನಡೆಯದ ಒಂದು ಪಂದ್ಯ, ಮುಂದಿನ ವರ್ಷಗಳ ಕಾಲ ಆದಾಯದಲ್ಲಿ ನಿರಂತರ ಕುಸಿತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಅಲ್ಲದೆ, ಐಸಿಸಿಯ ಆದಾಯ ಹಂಚಿಕೆ ಕೇವಲ ಸಂಖ್ಯೆಗಳ ಲೆಕ್ಕಾಚಾರವಲ್ಲ. ನಂಬಿಕೆ ಮತ್ತು ಪಾಲನೆಯೂ ಪ್ರಮುಖ ಪಾತ್ರ ವಹಿಸುತ್ತವೆ. ವಿಶ್ವಾಸಾರ್ಹತೆಯ ಕೊರತೆ ಹೊಂದಿರುವ ಮಂಡಳಿಗಳು ಭವಿಷ್ಯದ ವಾಣಿಜ್ಯ ಒಪ್ಪಂದಗಳ ಮಾತುಕತೆಯಲ್ಲಿ ಸಮಾನ ಪ್ರಭಾವವನ್ನು ಹೊಂದಲು ಸಾಧ್ಯವಾಗುವುದಿಲ್ಲ.
ಹಣಕಾಸಿನ ಲೆಕ್ಕಪತ್ರಗಳ ನಡುವೆ ಸಾವಿರಾರು ಅಭಿಮಾನಿಗಳು ಮರೆಯಾಗಲಿದ್ದಾರೆ. ಈ ಒಂದೇ ಪಂದ್ಯಕ್ಕಾಗಿ ವಿಮಾನ ಟಿಕೆಟ್, ಹೋಟೆಲ್ ಬುಕ್ಕಿಂಗ್ ಹಾಗೂ ಪಂದ್ಯ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿರುವ ಅಭಿಮಾನಿಗಳಿಗೆ ನಿರಾಸೆಯಾಗಲಿದೆ. ಆದ್ದರಿಂದ ಅವರಿಗೆ ಹೆಚ್ಚು ನಷ್ಟ ಆದಂತಾಗಲಿದೆ.
ಭಾರತ-ಪಾಕಿಸ್ತಾನ ಪಂದ್ಯ ಇದು ಕೇವಲ ಕ್ರಿಕೆಟ್ ಪಂದ್ಯವಲ್ಲ. ಜಾಗತಿಕ ಟೂರ್ನಿಗಳನ್ನು ಆರ್ಥಿಕವಾಗಿ ಜೀವಂತವಾಗಿಟ್ಟುಕೊಳ್ಳುವ ಪ್ರಮುಖ ಹಣಕಾಸಿನ ದಾರಿಯಾಗಿದೆ. ಈ ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರ ಒಂದೇ ವಿಶ್ವಕಪ್‌ಗೆ ಮಾತ್ರ ಹೊಡೆತ ನೀಡುವುದಿಲ್ಲ. ಅದು ಪ್ರಸಾರ ಸಂಸ್ಥೆಗಳು, ಐಸಿಸಿ, ಸದಸ್ಯ ಮಂಡಳಿಗಳು, ಪ್ರಾಯೋಜಕರು ಮತ್ತು ಅಭಿಮಾನಿಗಳ ಮೇಲೆ ಸರಣಿ ಪರಿಣಾಮ ಬೀರುತ್ತದೆ. ಇದರಲ್ಲಿ ತಾತ್ಕಾಲಿಕವಾಗಿಯೂ ಹಾಗೂ ದೀರ್ಘಾವಧಿಯಲ್ಲಿಯೂ ಅತಿದೊಡ್ಡ ನಷ್ಟ ಎದುರಿಸುವುದು ಪಾಕಿಸ್ತಾನವೇ.












Click it and Unblock the Notifications